ADVERTISEMENT

ಬಲಿಪಾಡ್ಯಮಿ ಆಚರಣೆ: ಬಾದಾಮಿ ಸ್ಮಾರಕಗಳಲ್ಲಿ ‘ಬಲಿಚಕ್ರವರ್ತಿ’

ಸಾಂಪ್ರದಾಯಿಕ ಮೂರ್ತಿಶಿಲ್ಪ

ಎಸ್.ಎಂ ಹಿರೇಮಠ
Published 21 ಅಕ್ಟೋಬರ್ 2025, 2:18 IST
Last Updated 21 ಅಕ್ಟೋಬರ್ 2025, 2:18 IST
ಬಾದಾಮಿ ಮೂರನೇ ಬಸದಿಯಲ್ಲಿ ಪೂರ್ವಾಭಿಮುಖವಾಗಿ ಕೆತ್ತನೆ ಮಾಡಿರುವ ಬೃಹದಾಕಾರದ ತ್ರಿವಿಕ್ರಮ ಮೂರ್ತಿಯೊಂದಿಗೆ ಬಲಿಚಕ್ರವರ್ತಿ
ಬಾದಾಮಿ ಮೂರನೇ ಬಸದಿಯಲ್ಲಿ ಪೂರ್ವಾಭಿಮುಖವಾಗಿ ಕೆತ್ತನೆ ಮಾಡಿರುವ ಬೃಹದಾಕಾರದ ತ್ರಿವಿಕ್ರಮ ಮೂರ್ತಿಯೊಂದಿಗೆ ಬಲಿಚಕ್ರವರ್ತಿ   

ಬಾದಾಮಿ: ದೀಪಾವಳಿ ಅಮಾವಾಸ್ಯೆ ಮರುದಿನ ಬರುವುದು ಬಲಿಪಾಡ್ಯಮಿ. ಉತ್ತರ ಕರ್ನಾಟಕದಲ್ಲಿ ದೀಪಾವಳಿ ಪಾಡ್ಯಮಿ ದಿನ ಕೃಷಿಕ ಮಹಿಳೆಯರು ಮನೆಯ ವಿವಿಧೆಡೆಯಲ್ಲಿ ಗೋಮಯದಿಂದ ಪಾಂಡವರ ಮೂರ್ತಿಯನ್ನು ಮಾಡಿ ಕೆಂಪು ಉತ್ತರಾಣಿ, ಹೊನ್ನಂಬರಿ ಮತ್ತು ಬಿಳಿ ಹೊನ್ನಿ ಹೂಗಳಿಂದ ಅಲಂಕಾರ ಮಾಡಿ ನೈವೇದ್ಯ ಮಾಡುವ ಸಂಪ್ರದಾಯ ಅನೇಕ ಶತಮಾನಗಳಿಂದ ಬಂದಿದೆ.

ಬಲಿಚಕ್ರವರ್ತಿಯ ತ್ಯಾಗದಿಂದ ವಾಮನ ರೂಪಿಯಾದ ತ್ರಿವಿಕ್ರಮನು ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ರಾಜ್ಯ ಭಾರ ಮಾಡುವಂತೆ ಅನುಗ್ರಹಿಸಿದ್ದರಿಂದ ದೀಪಾವಳಿ ಪಾಡ್ಯಮಿ ದಿನ ಬಲಿಚಕ್ರವರ್ತಿಯ ಆರಾಧನೆ ಕೆಲವೆಡೆ ನಡೆಯುತ್ತಿದೆ. ಬಲಿಪಾಡ್ಯಮಿ ದಿನ ಬಲಿಯು ಭೂಲೋಕಕ್ಕೆ ಆಗಮಿಸಿ ದೀಪಗಳ ಬೆಳಕನ್ನು ಕಂಡು ಆನಂದ ಪಡುವನೆಂಬ ನಂಬಿಕೆಯಿಂದ ದೀಪವನ್ನು ಬೆಳಗಿಸುವರು.

ಚಾಲುಕ್ಯ ದೊರೆಗಳು ಶೈವ, ವೈಷ್ಣವ, ಜೈನ, ಬೌದ್ಧ, ರಾಮಾಯಣ ಮತ್ತು ಮಹಾಭಾರತ ಸನ್ನಿವೇಶಗಳ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳನ್ನು, ಪಕ್ಷಿ, ಪ್ರಾಣಿಗಳನ್ನು ಸ್ಮಾರಕಗಳಲ್ಲಿ ಅರಳಿಸಿದ್ದಾರೆ. ಬಲಿಚಕ್ರವರ್ತಿಯ ಮೂರ್ತಿಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ADVERTISEMENT

ಭಕ್ತ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಅಮರನಾಗಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಗೆಲ್ಲಲು ಅಶ್ವಮೇಧಯಾಗ ಮಾಡುವಾಗ ದೇವಾನುದೇವತೆಗಳು ವಿಷ್ಣುವಿಗೆ ಮೊರೆ ಹೋಗುವರು. ಬಲಿಚಕ್ರವರ್ತಿಯು ದಾನಶೂರನಾಗಿದ್ದನು. ಅಶ್ವಮೇಧಯಾಗವನ್ನು ಸ್ಥಗಿತಗೊಳಿಸಲು ವಿಷ್ಣುವು ಕುಬ್ಜನಾಗಿ ವಾಮನ ರೂಪದಲ್ಲಿ ದಾನಕೇಳಲು ಬಲಿಚಕ್ರವರ್ತಿಯ ಹತ್ತಿರ ಬರುವನು.

ವಿಷ್ಣುವು ವಾಮನ ರೂಪತಾಳಿ ಬಂದದ್ದು ರಾಕ್ಷಸರ ಗುರು ಶುಕ್ರಾಚಾರ್ಯನಿಗೆ ತಿಳಿಯುವುದು. ದಾನ ಕೊಡಬೇಡ ಎಂದು ಹೇಳುವ ಮುನ್ನವೇ ಬಲಿಯು ವಾಮನನಿಗೆ ಏನು ಬೇಕು ಕೇಳು ಎಂದಾಗ ಮೂರು ಹೆಜ್ಜೆ ಇಡಲು ಜಾಗಕೊಡು ಎಂದು ವಾಮನ ಕೇಳುವನು. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಯು ಜಾಗ ಕೊಡಲು ಒಪ್ಪುವನು.

ವಾಮನ ಭೂಮಿ ಆಕಾಶದೆತ್ತರಕ್ಕೆ ಬೆಳೆದು ನಿಂತು ಒಂದು ಹೆಜ್ಜೆಯನ್ನು ಭೂಮಿಗೆ, ಇನ್ನೊಂದು ಹೆಜ್ಜೆಯನ್ನು ಆಕಾಶದಲ್ಲಿಟ್ಟು ಇನ್ನೊಂದು ಹೆಜ್ಜೆಯನ್ನು ಎಲ್ಲಿ ಇರಿಸಬೇಕು ಎಂದಾಗ ಬಲಿಯು ಮೂರನೇ ಹೆಜ್ಜೆಯನ್ನು ನನ್ನ ತಲೆಯ ಮೇಲಿರಿಸು ಎಂದಾಗ ವಾಮನ ಹೆಜ್ಜೆಯನ್ನಿಟ್ಟು ಪಾತಾಳಕ್ಕೆ ತಳ್ಳುವನೆಂಬ ಪೌರಾಣಿಕ ಹಿನ್ನೆಲೆಯ ಕಥೆಯ ಮೂರ್ತಿಶಿಲ್ಪವನ್ನು ಬಸದಿಗಳಲ್ಲಿ ವೀಕ್ಷಿಸಬಹುದಾಗಿದೆ.

ತ್ರಿವಿಕ್ರಮನ ಮೂರ್ತಿ ಮೇಲೆ ರಾಹು, ಕೇತು ಕೆಳಗೆ ಬಲಿಯ ಪತ್ನಿ ವಿಂದ್ಯಾವಳಿ, ಶುಕ್ರಾಚಾರ್ಯ ಮತ್ತು ಬಲಿಯ ಮಗ ನಮೂಚಿಯು ತ್ರಿವಿಕ್ರಮನ ಬಲಗಾಲನ್ನು ಹಿಡಿದು ಅಪ್ಪಿಕೊಂಡಿದ್ದಾನೆ. ಬಲಿಯ ಸೇನಾಧಿಪತಿಗಳು ಖಡ್ಗವನ್ನು ಎಸೆಯುವುದು ಮತ್ತು ಮಂತ್ರಿ ಪರಿವಾರದ ಮೂರ್ತಿಗಳನ್ನು ವೀಕ್ಷಿಸಬಹುದಾಗಿದೆ.

‘ಬಲಿಪಾಡ್ಯಮಿ ಆಚರಣೆಯ ಸಾಂಪ್ರದಾಯಿಕ ಮೂರ್ತಿಗಳನ್ನು ಚಾಲುಕ್ಯರ ಶಿಲ್ಪಿಗಳು 6 ನೇ ಶತಮಾನದಲ್ಲಿಯೆ ಬಾದಾಮಿ ಬಸದಿಯಲ್ಲಿ ಮತ್ತು ಪಟ್ಟದಕಲ್ಲು ವಿರೂಪಾಕ್ಷ ದೇವಾಲಯದ ಭಿತ್ತಿಯಲ್ಲಿ ಅರಳಿಸಿದ್ದಾರೆ’ ಎಂದು ಪ್ರವಾಸಿ ಮಾರ್ಗದರ್ಶಿ ರಾಜು ಕಲ್ಮಠ ಹೇಳಿದರು.

ಚಾಲುಕ್ಯರ ಸ್ಮಾರಕಗಳಲ್ಲಿ ಸಾಂಪ್ರದಾಯಿಕ ಶಿಲ್ಪಗಳು ಎರಡು, ಮೂರನೇ ಬಸದಿಯಲ್ಲಿ ಬಲಿಚಕ್ರವರ್ತಿ ವಿರೂಪಾಕ್ಷ ದೇವಾಲಯ ಭಿತ್ತಿಯಲ್ಲಿ ಬಲಿಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.