ADVERTISEMENT

ಬನಶಂಕರಿ: ಎಲ್ಲಿ ನೋಡಿದರಲ್ಲಿ ತ್ಯಾಜ್ಯ

ಎಸ್.ಎಂ ಹಿರೇಮಠ
Published 14 ಏಪ್ರಿಲ್ 2025, 4:43 IST
Last Updated 14 ಏಪ್ರಿಲ್ 2025, 4:43 IST
ಬಾದಾಮಿಯಿಂದ ಪುಣ್ಯ ಕ್ಷೇತ್ರ ಬನಶಂಕರಿಯಲ್ಲಿ ತುಂಬಿರುವ ತ್ಯಾಜ್ಯ
ಬಾದಾಮಿಯಿಂದ ಪುಣ್ಯ ಕ್ಷೇತ್ರ ಬನಶಂಕರಿಯಲ್ಲಿ ತುಂಬಿರುವ ತ್ಯಾಜ್ಯ   

ಬಾದಾಮಿ: ಉತ್ತರ ಕರ್ನಾಟಕದ ಪುಣ್ಯಕ್ಷೇತ್ರ ಆದಿ ಶಕ್ತಿ ಬನಶಂಕರಿ ದೇವಾಲಯದ ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ತ್ಯಾಜ್ಯವೇ ಕಾಣಸಿಗುತ್ತದೆ.

ಪುಣ್ಯಕ್ಷೇತ್ರಕ್ಕೆ ಬಂದ ಭಕ್ತರು ಮತ್ತು ಪ್ರವಾಸಿಗರು ತ್ಯಾಜ್ಯ ಕಂಡು, ಸ್ವಚ್ಛತೆಗೆ ಕ್ರಮವಹಿಸದ ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.

‘ಬನಶಂಕರಿದೇವಿ ಜಾತ್ರೆ ಮುಗಿದು ಮೂರು ತಿಂಗಳು ಗತಿಸಿದರೂ ದೇವಾಲಯ ಟ್ರಸ್ಟ್, ಚೊಳಚಗುಡ್ಡ ಗ್ರಾಮ ಪಂಚಾಯ್ತಿ, ದೇವಾಂಗ ಸಮಾಜ ಮತ್ತು ಬಾಡಿಗೆ ನೀಡಿದ ಖಾಸಗಿ ಮಾಲೀಕರು ತ್ಯಾಜ್ಯ ತೆರವಿನ ಬಗ್ಗೆ ಯೋಚನೆ ಮಾಡಿದಂತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಇಷ್ಟಲಿಂಗ ಶಿರಸಿ ಆರೋಪಿಸಿದರು.

ADVERTISEMENT

‘ಬನಶಂಕರಿದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸ್ವಚ್ಛತೆ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ ಅವರಿಗೆ ವಸ್ತು ಸ್ಥಿತಿಯನ್ನು ಗಮನಕ್ಕೆ ತಂದರೂ ಸ್ಥಳೀಯ ಅಧಿಕಾರಿಗಳು ಸ್ವಚ್ಛತೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ’ ಎಂದು ಹೇಳಿದರು.

ತಿಂಗಳ ವರೆಗೆ ನಡೆಯುವ ಜಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಅಂಗಡಿಗಳು, 12ಕ್ಕೂ ಅಧಿಕ ನಾಟಕ ಕಂಪನಿಗಳು ಇರುತ್ತವೆ. ನಿತ್ಯ ಲಕ್ಷಕ್ಕೂ ಅಧಿಕ ಜನರು ಜಾತ್ರೆಗೆ ಬರುತ್ತಾರೆ. ಇಲ್ಲಿ ಹರಡಿರುವ ತ್ಯಾಜ್ಯ ಬರುವ ಜಾತ್ರೆಯ ವರೆಗೂ ಹಾಗೆಯೇ ಇರುತ್ತದೆ. ಮುಂದಿನ ವರ್ಷ ಜಾತ್ರೆಗೆ ಬಂದವರೇ ಸ್ವಚ್ಛ ಮಾಡಿಕೊಳ್ಳಬೇಕು ಎನ್ನುಂತಿದೆ ಪರಿಸ್ಥಿತಿ.

‘ಜಾತ್ರೆಯ ಸಮಯದಲ್ಲಿ ನಿಸರ್ಗ ಬಳಗದ ಸದಸ್ಯರು ಪ್ಲಾಸ್ಟಿಕ್ ಬಳಸಬೇಡಿ ಎಂದು ಜನಜಾಗೃತಿ ಜಾಥಾ ಕೈಗೊಂಡು ಭಿತ್ತಿ ಪತ್ರಗಳನ್ನು ವಿತರಿಸಿ ಅಂಗಡಿಗೆ ಅಂಟಿಸಿದರೂ ಪ್ಲಾಸ್ಟಿಕ್ ಬಳಸಿ ಸುತ್ತಲಿನ ಪ್ರದೇಶದಲ್ಲಿ ತ್ಯಾಜ್ಯ ಹರಡಲಾಗಿದೆ. ಜಾತ್ರಾ ಸಮಿತಿ ಸಭೆಯನ್ನು ಕರೆದು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಒತ್ತಾಯಿಸಿದರು.

ಬನಶಂಕರಿಯಲ್ಲಿ ಐಟಿಐ ಕಾಲೇಜು ಮುಂದೆ ಹರಡಿದ ತ್ಯಾಜ್ಯ
ದೇವಾಲಯದ ಟ್ರಸ್ಟ್ ಸ್ವಚ್ಛ ತ್ಯಾಜ್ಯ ತೆರವು ಮಾಡಬೇಕು. ಸ್ವಚ್ಛತೆ ಕೈಗೊಳ್ಳಲು ತಾಲ್ಲೂಕು ಪಂಚಾಯಿತಿಯಲ್ಲಿ ಅನುದಾನವಿಲ್ಲ
ಸುರೇಶ ಕೋಕರೆ ಇಒ
ದೇವಾಲಯದ ಸುತ್ತಲಿನ ಆವರಣ ಮತ್ತು ರಥ ಭೀದಿಯನ್ನು ಸ್ವಚ್ಛ ಮಾಡಿದ್ದೇವೆ. ನಾಟಕ ಕಂಪನಿಗಳಿಗೆ ಮತ್ತು ಬಯಲು ಜಾಗ ಬಾಡಿಗೆ ನೀಡಿದ ಖಾಸಗಿ ಮಾಲೀಕರೇ ಆ ಜಾಗ ಸ್ವಚ್ಛತೆ ಮಾಡಬೇಕು
ಮಹೇಶ ಪೂಜಾರ ದೇವಾಲಯ ಟ್ರಸ್ಟ್ ಸದಸ್ಯ
ದೇವಾಲಯದ ಪರಿಸರ ಸ್ವಚ್ಛವಾಗಿರಬೇಕು. ಎಲ್ಲೆಂದರಲ್ಲಿ ತ್ಯಾಜ್ಯವೇ ತುಂಬಿದೆ. ಸಂಬಂಧಿಸಿದವರು ತ್ಯಾಜ್ಯ ತೆರವು ಮಾಡಬೇಕು
ಗುರುರಾಜ ಪಾಟೀಲ ಭಕ್ತ ಹುಬ್ಬಳ್ಳಿ

‘ದಿನಕ್ಕೆ ಅಂದಾಜು 20 ಟನ್ ತ್ಯಾಜ್ಯ ಸಂಗ್ರಹ’

‘ಬನಶಂಕರಿದೇವಿ ಜಾತ್ರೆಗೂ ಮುನ್ನವೇ ಬನಶಂಕರಿ ದೇವಾಲಯ ಟ್ರಸ್ಟ್‌ನಿಂದ ಸ್ಟಚ್ಛತಾ ಕಾರ್ಯ ಆರಂಭಿಸಲಾಗುತ್ತಿದೆ. ನಿತ್ಯ 30 ಜನ ಕಾರ್ಮಿಕರು ತಿಂಗಳ ವರೆಗೆ ಸ್ವಚ್ಛತೆ ಮಾಡುವರು. ದಿನಕ್ಕೆ ಅಂದಾಜು 16 ರಿಂದ 20 ಟನ್ ತ್ಯಾಜ್ಯವನ್ನು ಟ್ರ್ಯಾಕ್ಟರ್‌ ಮೂಲಕ ಸಂಗ್ರಹಿಸಿ ಗ್ರಾಮ ಪಂಚಾಯ್ತಿ ಗುಂಡಿಯಲ್ಲಿ ಹಾಕಲಾಗುವುದು. ರೀಸೈಕ್‌ಲಿಂಗ್ ವ್ಯವಸ್ಥೆ ಇಲ್ಲ’ ಎಂದು ಬನಶಂಕರಿ ದೇವಸ್ಥಾನದ ಟ್ರಸ್ಟ್ ಸದಸ್ಯ ಮಹೇಶ ಪೂಜಾರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.