ADVERTISEMENT

ಸಿಎಂಗೆ ಸಿ.ಡಿ ತೋರಿಸಿ ಕಾಂಗ್ರೆಸ್ ನಾಯಕರ ಬ್ಲಾಕ್‌ಮೇಲ್: ಯತ್ನಾಳ ಆರೋಪ

ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 12:10 IST
Last Updated 14 ಜನವರಿ 2021, 12:10 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬಾಗಲಕೋಟೆ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ ಇಟ್ಟುಕೊಂಡು ರಾಜ್ಯದ ಕಾಂಗ್ರೆಸ್ ನಾಯಕರು ಬ್ಲಾಕ್‌ಮೇಲ್‌ ಮಾಡಿ ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುತ್ತಿದ್ದಾರೆ’ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಸೇರಿರುವ ಕಣ್ಣಿನಲ್ಲಿ ನೋಡಲಾರದಂತಹ ಸಿಡಿ ಇದೆ. ಅದನ್ನು ಅವರ ಮನೆಯಲ್ಲಿ ಮೊಮ್ಮಗನೇ ಮಾಡಿದ್ದಾನೆ.ಅದೇ ಸಿಡಿ ನನ್ನ ಬಳಿ ಇದ್ದಿದ್ದರೆ ನಾನು ಉಪಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದರು.

ಸಿಎಂ ಮುಂದಿಟ್ಟುಕೊಂಡು ಸಿಎಂ ಬೆದರಿಸಿ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರಗಳಿಗೆ ಬಿಜೆಪಿ ಶಾಸಕರಿಗಿಂತ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ.ನಾವು (ಬಿಜೆಪಿಯವರು) ಅನುದಾನ ಕೇಳಿದರೆ ವಿಷ ಕುಡಿಯಲು ಹಣವಿಲ್ಲ ಎನ್ನುತ್ತಾರೆ. ಆದರೆ ಜಮೀರ್ ಅಹಮದ್, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರಗಳಿಗೆ ಹೆಚ್ಚಿನ ನೆರವು ಸಿಗುತ್ತಿದೆ. ಇನ್ನೊಂದೆಡೆ ಸಿಎಂ ಪುತ್ರ ವಿಜಯೇಂದ್ರ ಚೇಲಾಗಳಿಗೆ ಹುದ್ದೆಗಳು ಸಿಗುತ್ತಿವೆ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಸಿಡಿ ಎಂಬುದು ಅವರು ಮಾತನಾಡುವ ರೀತಿಯಿಂದಲೇ ಗೊತ್ತಾಗುತ್ತದೆ. ನಿಜವಾಗಲೂ ಕಾಂಗ್ರೆಸ್‌ನವರು ವಿರೋಧ ಪಕ್ಷದವರಾಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಯತ್ನಾಳ, ಸಿಡಿ ರಹಸ್ಯ ಕುರಿತು ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.