ADVERTISEMENT

ಬಾಗಲಕೋಟೆ: ವೀಳ್ಯದೆಲೆಗೆ ಉತ್ತಮ ಬೆಲೆ; ರೈತರಿಗೆ ಸಂತಸ

ಒಂದು ಡಾಗ್ ದರ ₹ 8,500ಕ್ಕೆ ಏರಿಕೆ

ಬಸವರಾಜ ಹವಾಲ್ದಾರ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
ಬಾಗಲಕೋಟೆ ಜಿಲ್ಲೆಯ ಗಾಣದಾಳದ ರೈತ ನರಸಿಂಹ ದೇಸಾಯಿ ಅವರ ಹೊಲದಲ್ಲಿ ಬೆಳೆದಿರುವ ವೀಳ್ಯದೆಲೆ
ಬಾಗಲಕೋಟೆ ಜಿಲ್ಲೆಯ ಗಾಣದಾಳದ ರೈತ ನರಸಿಂಹ ದೇಸಾಯಿ ಅವರ ಹೊಲದಲ್ಲಿ ಬೆಳೆದಿರುವ ವೀಳ್ಯದೆಲೆ   

ಬಾಗಲಕೋಟೆ: ವೀಳ್ಯದೆಲೆ ಬೆಲೆ ಏರಿಕೆಯಿಂದ ರೈತರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 12,000 ಎಲೆಗಳಿರುವ ಒಂದು ಡಾಗ್ (ಅಂಡಿಗಿ) ₹2 ಸಾವಿರದಿಂದ 3 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಈಗ ದರ ₹6,000 ದಿಂದ ₹8,500ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಜಗದಾಳ, ನಾವಲಗಿ, ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಸುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಿದ್ದು, ಮುಂಬೈ, ಪುಣೆ, ಹೈದರಾಬಾದ್‌, ಬೆಂಗಳೂರು, ಸತಾರಾ, ಬೆಳಗಾವಿ ಕಡೆ ರವಾನೆಯಾಗುತ್ತದೆ. 

‘ಒಂದು ಎಕರೆಯಲ್ಲಿ ವೀಳ್ಯದೆಲೆ ಕೃಷಿಗೆ ವರ್ಷಕ್ಕೆ ₹ 2.5 ರಿಂದ 3 ಲಕ್ಷ ಖರ್ಚಾಗುತ್ತದೆ. ಈ ಬಾರಿ ಚಳಿ ಹೆಚ್ಚಿದ್ದ ಕಾರಣ ಇಳುವರಿ ತಗ್ಗಿದೆ. ಈಗ ಎಲೆಬಳ್ಳಿ ಕಟ್ಟುವುದರಿಂದ ಫಸಲು ಕಡಿಮೆ ಇರುತ್ತದೆ’ ಎಂದು ಜಗದಾಳದ ರೈತ ಸದಾಶಿವ ಬಂಗಿ ತಿಳಿಸಿದರು.

ADVERTISEMENT

ಶುಭ ಕಾರ್ಯಗಳು, ತಾಂಬೂಲ ಹಾಕುವವರಿಗೆ, ಪಾನ್‌ಶಾಪ್‌ಗಳಲ್ಲಿ ವೀಳ್ಯದೆಲೆಗಳು ಬೇಕು. ವೀಳ್ಯದೆಲೆಗಳಿಗೆ ವರ್ಷಪೂರ್ತಿ ಬೇಡಿಕೆ ಇರುತ್ತದೆ. ದರ ಏರಿಕೆಯಿಂದ ತಾಂಬೂಲ ಪ್ರಿಯರಿಗೆ ಬಿಸಿ ತಟ್ಟಿದೆ. 

‘₹ 10ಕ್ಕೆ 25–30 ಎಲೆಗಳನ್ನು ನೀಡುತ್ತಿದ್ದರು. ಈಗ ಪ್ರತಿ ಎಲೆಗೆ ಒಂದು ರೂಪಾಯಿ ದರ ಇದೆ. ತಾಂಬೂಲದ ಉಳಿದ ವಸ್ತುಗಳ ಬೆಲೆ ಏರಿತ್ತು. ಈಗ ಎಲೆಗಳ ಬೆಲೆಯೂ ಹೆಚ್ಚಿದೆ’ ಎನ್ನುತ್ತಾರೆ ಶಂಕರಗೌಡ ಪಾಟೀಲ

ಮಧ್ಯವರ್ತಿಗಳ ಹಾವಳಿ: ‘ಬೇರೆ, ಬೇರೆ ರಾಜ್ಯಗಳಿಗೆ ವೀಳ್ಯದೆಲೆಯನ್ನು ಕಳುಹಿಸಬೇಕು. ಭಾಷಾ ಸಮಸ್ಯೆಯಿಂದ ರೈತರು ಹೋಗುವುದಿಲ್ಲ. ಕೆಲವರೇ ಮಧ್ಯವರ್ತಿಗಳಾಗಿ, ಹೊರ ರಾಜ್ಯಗಳಿಗೆ ಎಲೆಗಳನ್ನು ಕಳುಹಿಸಿಕೊಡುತ್ತಾರೆ. ಸ್ಥಳೀಯವಾಗಿಯೇ ಮಾರುಕಟ್ಟೆಯಾದರೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

ಚೊಳಚಗುಡ್ಡ ಭಾಗದಲ್ಲಿ ಅಂಬಾಡಿ ಎಲೆ ಬೆಳೆಯಲಾಗುತ್ತದೆ. 10 ರಿಂದ 12 ದಿನ ಹಾಳಾಗುವುದಿಲ್ಲ. ಆದ್ದರಿಂದ ಇಲ್ಲಿನ ಎಲೆಗಳಿಗೆ ಉತ್ತಮ ಬೇಡಿಕೆ ಇದೆ
ಮೌನೇಶ ಮರಡಿ ರೈತ ಚೊಳಚಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.