
ಜಮಖಂಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೆರವಣಿಗೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಬೀದಿ ದೀಪಗಳನ್ನು ಆರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಇಲ್ಲಿನ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
‘ನಗರದ ದೇಸಾಯಿ ವೃತ್ತದಿಂದ ಅಶೋಕ ವೃತ್ತದ ಕಡೆಗೆ ಮೆರವಣಿಗೆ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೀದಿ ದೀಪಗಳು ಆರಿವೆ. ಇದು ಕಾಣದ ಕೈಗಳ ಒತ್ತಡಕ್ಕೆ ಮಣಿದು ಮಾಡಿರುವ ಸಂಚು’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ ಮುಖಂಡರು, ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪಟ್ಟು ಹಿಡಿದರು.
ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ‘ಮೆರವಣಿಗೆಯಿಂದ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಇದನ್ನು ಸಹಿಸದ ವಿರೋಧಿಗಳು ಕುತಂತ್ರ ನಡೆಸಿದ್ದಾರೆ. ಅಧಿಕಾರಿಗಳು ಸಹ ಇದಕ್ಕೆ ಸಾಥ್ ನೀಡುತ್ತಿರುವುದು ಖಂಡನೀಯ’ ಎಂದರು.
ಇದಕ್ಕೆ ಅಧಿಕಾರಿಗಳು ತಕ್ಷಣವೇ ದೀಪಗಳನ್ನು ಪುನಃ ಚಾಲನೆಗೊಳಿಸಿದರು.
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ ಶಿರಗಣ್ಣವರ ಮಾತನಾಡಿ, ‘ಘಟನೆ ಕುರಿತು ಸಂಪೂರ್ಣ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಎರಡು ದಿನ ಕಾಲಾವಕಾಶ ನೀಡುತ್ತಿದ್ದೇವೆ. ಒಂದು ವೇಳೆ ಸತ್ಯಾಂಶ ಹೊರಬರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.
ಮುಖಂಡರಾದ ವಿರುಪಾಕ್ಷಯ್ಯ ಗುಡಗುಂಟಿ, ಮಲ್ಲು ದಾನಗೌಡ, ಶಂಕರ ಕಾಳೆ, ಪ್ರಶಾಂತ ಗಾಯಕವಾಡ, ಕುಷಾಲ ವಾಗ್ಮೋರೆ, ಪ್ರಶಾಂತ ಚರಕಿ, ರಮೇಶ ಆಲಬಾಳ, ಶ್ರೀಧರ ಕಂಬಿ, ಶಿವು ಗಸ್ತಿ, ರಾಜು ಚಿಕನಾಳ, ಸಂತೋಷ ಮಾನೆ, ಸಚೀನ ಅಸೂಗಡೆ, ಅಖಿಲೇಶ ಕಾಂಬಳೆ, ಪ್ರದೀಪ ಶಿಂಗಾರಿ, ಯಮನೂರ ಮೂಲಂಗಿ, ಪವನ ಸಾಳುಂಕೆ, ಸಚೀನ ಪಟ್ಟಣಶೆಟ್ಟಿ, ನರೇಂದ್ರ ಮಾನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.