ಮುಧೋಳ: ಸಾಧನೆಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ. ಪರಿಶ್ರಮ, ಅಧ್ಯಯನ, ಪ್ರಯೋಗಶೀಲತೆ ಆತ್ಮವಿಶ್ವಾಸದಿಂದ ಕೃಷಿ ಮಾಡಿರೆ ಯಶಸ್ಸು ಖಂಡಿತ. ವೈಜ್ಞಾನಿಕ ಕೃಷಿ ಮೂಲಕ ಹೊಸ, ಹೊಸ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ ಮುಧೋಳ ತಾಲ್ಲೂಕು ಶಿರೋಳ ಗ್ರಾಮದ ಯುವ ಕೃಷಿಕ, ಡಿಪ್ಲೊಮಾ ಎಲೆಕ್ಟ್ರಿಕಲ್ ಎಂಜಿನಿಯರ್ ಅಭಿನಂದನ್ ಕಡಕೋಳ.
ಅಭಿನಂದನ್ ತಂದೆ ಕಳೆದುಕೊಂಡ ನಂತರ 19ನೇ ವರ್ಷದಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ಕಲ್ಲಂಗಡಿ ಬೆಳೆದು ಯಶಸ್ಸು ಕೊಂಡುಕೊಂಡಿದ್ದ. ಸ್ಟ್ರಾಬೇರಿ ಬೆಳೆದಾಗಲೂ ಕೃಷಿ ಕೈ ಹಿಡಿಯಿತು. ಅದರಲ್ಲಿ ಯಶಸ್ಸು ಪಡೆದುಕೊಂಡಿದ್ದರ ಫಲವೇ ಈ ಬ್ಲೂಬೇರಿ ಬೆಳೆಯುವಂತಾಗಿದೆ.
ಮೂರು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಹನಿ ನೀರಾವರಿ ಅಳವಡಿಸಿಕೊಳ್ಳಲಾಗಿದೆ. 1.5 ಎಕರೆಯಲ್ಲಿ ದ್ರಾಕ್ಷಿ, ಅರ್ಧ ಎಕರೆ ಸ್ಟ್ರಾಬೇರಿ, ಅರ್ಧ ಎಕರೆ ಬ್ಲೂಬೇರಿ, ಅರ್ಧ ಎಕರೆ ಡೊಣ್ಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ.
ಸ್ಟ್ರಾಬೇರಿ: 2019 ರಲ್ಲಿ (ಕೊವಿಡ್ ಸಂದರ್ಭದಲ್ಲಿ) ಬಿಸಿಲು ನಾಡು ಉತ್ತರ ಕರ್ನಾಟಕದಲ್ಲಿ ಬೆಳೆಯಲು ನಿರ್ಧರಿಸಿ ಮಹಾಬಲೇಶ್ವರದಿಂದ 2 ಸಾವಿರ ಸಸಿಗಳನ್ನು ₹11ಕ್ಕೆ ಒಂದರಂತೆ ತರಲಾಯಿತು. 2020ರಲ್ಲಿ ಪುಣೆಯಿಂದ ಮದರ್ ಪ್ಲಾಂಟ್ (ತಾಯಿ ಸಸಿ) ತಂದು ನರ್ಸರಿ ಮೂಲಕ ಸಸಿಗಳನ್ನು ಮಾಡಲಾಯಿತು. ವಿಂಟರ್ ಡೌನ್, ನಾಬಿಲಾ, ಆರ್-1, ಫ್ಯಾಮಿಲಿನ್ ಸಸಿಗಳನ್ನು ಹಚ್ಚಲಾಗಿದೆ. 20 ಸಾವಿರ ಸಸಿಗಳನ್ನು ಬೆಳೆಸಲಾಗಿದ್ದು, ಪ್ರತಿ ವರ್ಷ 3 ಲಕ್ಷ ಖರ್ಚಾಗುತ್ತಿದೆ. ಖರ್ಚು ಕಳೆದು ₹6 ಲಕ್ಷ ಲಾಭವಾಗುತ್ತಿದೆ.
ಸ್ಟ್ರಾಬೇರಿ ಹಣ್ಣುಗಳು ಮುಧೋಳ, ಜಮಖಂಡಿ, ವಿಜಯಪುರದಲ್ಲಿ ಪ್ರತಿ ಕೆಜಿಗೆ ₹200 ದಂತೆ ಮಾರಾಟವಾಗುತ್ತವೆ. ಮಾರುಕಟ್ಟೆಯಲ್ಲಿ ₹400 ಕೆಜಿ ಇದ್ದರೂ ತೋಟಕ್ಕೆ ಬಂದು ಕೊಳ್ಳುವ ಗ್ರಾಹಕರಿಗೆ ₹200 ಕೆಜಿ ಕೊಡಲಾಗುತ್ತಿದೆ.
ದ್ರಾಕ್ಷಿ: 2023-24ನೇ ಸಾಲಿನಲ್ಲಿ ಕ್ರೀಮಸನ್ ತಳಿ ಸಸಿಯನ್ನು ಮಹಾರಾಷ್ಟ್ರದ ನಾಸಿಕ್‌ದಿಂದ ₹6 ಒಂದರಂತೆ ಸಸಿ ತರಲಾಗಿದೆ. ಈ ತಳಿಯ ಹಣ್ಣು ಬಹಳದಿನ ಬಾಳಿಕೆ ಬರುತ್ತದೆ. ಮುಂದಿನ ವರ್ಷ ಫಸಲಿನ ನಿರೀಕ್ಷೆಯಿದೆ.
ಬ್ಲೂಬೇರಿ: ಮಹಾರಾಷ್ಟ್ರದ ತೋಟಗಾರಿಕೆ ತಜ್ಞ ಅಂಬರೀಷ್ ಎಂಬುವವರಿಂದ ಒಂದು ಸಾವಿರ ಸಸಿಗಳನ್ನು ಪ್ರತಿ ಸಸಿಗೆ ₹400 ರಂತೆ ತಂದು 2024 ಅಕ್ಟೋಬರ್‌ನಲ್ಲಿ ನಾಟಿ ಮಾಡಲಾಗಿದೆ. ಮಣ್ಣಿನ ಸಂಪರ್ಕವಿಲ್ಲದೆ ಗ್ರೋ ಬ್ಯಾಗ್ (ಒಂದಕ್ಕೆ ₹250) ಮೂಲಕ ಬೆಳೆಯಲಾಗುತ್ತಿದೆ. ಒಮ್ಮೆ ನಾಟಿ ಮಾಡಿದರೆ 8 ರಿಂದ 10 ವರ್ಷ ಫಸಲು ಪಡೆಯಬಹುದಾಗಿದೆ. ಆರಂಭದಲ್ಲಿ ಪ್ರತಿ ಸಸಿಯಿಂದ ಅರ್ಧ ಕೆ.ಜಿ ಇಳುವರಿ ಬರುತ್ತದೆ. ನಾಲ್ಕನೇ ವರ್ಷದ ವೇಳೆಗೆ 5 ಕೆ.ಜಿ ಇಳುವರಿ ಬರುತ್ತದೆ. ಅರ್ಧ ಎಕರೆಗೆ ಕೃಷಿಗೆ ₹8 ಲಕ್ಷ ವೆಚ್ಚ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹2 ಸಾವಿರದಂತೆ ಮಾರಾಟವಾಗುತ್ತದೆ.
ಡೊಣ್ಣಮೆಣಸಿನಕಾಯಿ: ಕೆಂಪು (ಎರಡು ಸಾವಿರ), ಹಳದಿ (ಎರಡು ಸಾವಿರ) ಹಾಗೂ ಹಸಿರು (ಎರಡು ಸಾವಿರ) ಸಸಿ ಡೊಣ್ಣಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಕೆಂಪು ಹಾಗೂ ಹಳದಿ ಬಣ್ಣದ ಬೀಜ ಒಂದಕ್ಕೆ ₹8.80 ಹಾಗೂ ಹಸಿರು ಬಣ್ಣದ್ದು ₹3 ಒಂದರಂತೆ ತರಲಾಗಿದೆ. 8 ರಿಂದ 12 ತಿಂಗಳವರೆಗೆ ಫಸಲು ಬರುತ್ತದೆ. ಪ್ರತಿ ಸಸಿಯಿಂದ 2 ರಿಂದ 3 ಕೆಜಿ ಇಳುವರಿ ನಿರೀಕ್ಷಿಸಲಾಗಿದೆ. 18 ಟನ್ ಇಳುವರಿ ಬರಲಿದೆ. ಪ್ರತಿ ಕೆಜಿ ₹80 ದರ ಸಿಗುವ ಸಾಧ್ಯತೆ ಇದೆ.
‘ನನ್ನ ಪ್ರಯೋಗಾತ್ಮ ಪ್ರಯತ್ನಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ಅರವಿಂದ ಬಳಗಾರ ಬೆಂಬಲವಾಗಿ ನಿಂತು ತಾಂತ್ರಿಕ ಸಲಹೆ, ಪ್ರಚಾರ ನೀಡುತ್ತಿದ್ದಾರೆ. ಸಹಾಯ ಧನದಲ್ಲಿ ಸ್ಟ್ರಾಬೇರಿಗೆ ವಿಡ್ ಮ್ಯಾಟ್, ದ್ರಾಕ್ಷಿ ಬೆಳೆಗೆ ಹವಾಮಾನ ಮುನ್ಸೂಚನಾ ಘಟಕ, ಟ್ರ್ಯಾಕ್ಟರ್ ಕೊಳ್ಳಲು ನೆರವಾಗಿದ್ದಾರೆ.ತಾಯಿ ರಾಜಮತಿ ಅಭಿನಂದನ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಾಹಿತಿಗೆ: ಅಭಿನಂದನ ಕಡಕೋಳ ಮೊ: 89711 05450 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.