ADVERTISEMENT

ಬಿಟಿಡಿಎ ಅಧ್ಯಕ್ಷ ಸ್ಥಾನ|ಕಾಂಗ್ರೆಸ್‌ಗೆ ‘ಅಲಗಿನ ಕತ್ತಿ’: ಇಕ್ಕಟ್ಟಿನಲ್ಲಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:00 IST
Last Updated 10 ಡಿಸೆಂಬರ್ 2025, 4:00 IST
ಬಾಗಲಕೋಟೆಯಲ್ಲಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ
ಬಾಗಲಕೋಟೆಯಲ್ಲಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ   

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕವನ್ನು ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಮುನ್ನ ಮಾಡಬೇಕೇ, ಚುನಾವಣೆಯ ನಂತರ ಮಾಡಬೇಕೇ ಎಂಬದು ಅಲಗಿನ ಕತ್ತಿಯಾಗಿದೆ.

ಚುನಾವಣೆಗೆ ಮುನ್ನ ಮಾಡಿದರೆ ಒಬ್ಬರನ್ನು ಸಮಾಧಾನಗೊಳಿಸಬಹುದು. ಆದರೆ, ಇತರೆ ಆಕಾಂಕ್ಷಿಗಳು ಚುನಾವಣೆಯಲ್ಲಿ ಒಳೇಟು ನೀಡುವ ಸಾಧ್ಯತೆಗಳಿವೆ. ಚುನಾವಣೆ ನಂತರ ಮಾಡುತ್ತೇವೆ ಎಂದರೆ, ಪಕ್ಷದ ನಾಯಕರ ಮಾತನ್ನು ನಂಬುವ ಸ್ಥಿತಿಯಲ್ಲಿ ಆಕಾಂಕ್ಷಿಗಳಿಲ್ಲ. ಇದೂ ಉಪಚುನಾವಣೆಯಲ್ಲಿ ಒಳೇಟಿಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರ ನಡೆದಿದೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಹಲವರು ಬಿಟಿಡಿಎ ಅಧ್ಯಕ್ಷ ಸ್ಥಾನ ನೀಡಲಾಗುವುದು. ಹಲವರಿಗೆ ಸದಸ್ಯ ಸ್ಥಾನ ದೊರೆಯಲಿದೆ ಎಂದು ಭರವಸೆ ನೀಡಲಾಗಿತ್ತು. ನಂತರದಲ್ಲಿ ನಡೆದ ಬೆಳವಣಿಗೆಗಳಲ್ಲಿ ಬಾಗಲಕೋಟೆ ಶಾಸಕರಾಗಿದ್ದ ಎಚ್‌.ವೈ. ಮೇಟಿ ಅವರೇ ಬಿಟಿಡಿಎ ಅಧ್ಯಕ್ಷರೂ ಆದರು. ಇದು ಹಲವರು ಆಕಾಂಕ್ಷಿಗಳಿಗೆ ಅಸಮಾಧಾನ ಉಂಟು ಮಾಡಿತ್ತು. 

ADVERTISEMENT

ಬಿಟಿಡಿಎ ಸದಸ್ಯರ ನೇಮಕವಾಗಲಿದೆ ಎಂದು ಹಲವು ಮುಖಂಡರು ಕಾದಿದ್ದರು. ಇಂದು, ನಾಳೆ ಎಂದು ಸರ್ಕಾರ ಎರಡೂವರೆ ವರ್ಷ ಕಳೆದಿದೆ. ಆದರೆ, ಇಂದಿನವರೆಗೂ ಸದಸ್ಯರ ನೇಮಕಾತಿ ಮಾಡಲಿಲ್ಲ. ಸರ್ಕಾರ ರಚನೆಗೆ ಶಾಸಕರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದ ಮುಖಂಡರು, ಕಾಯುವುದೇ ಕೆಲಸವಾಗಿತ್ತು.

ಮುಳುಗಡೆಯಾಗಿರುವ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾದಿಕಾರ ಮಾಡುತ್ತದೆ. ಅಧ್ಯಕ್ಷ ಸ್ಥಾನವೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವುದರಿಂದ ಹಲವರು ಕಣ್ಣು ಅಧ್ಯಕ್ಷ ಸ್ಥಾನ ಹುದ್ದೆಯ ಮೇಲಿದೆ.

ಉಪಚುನಾವಣೆಗೆ ಮುನ್ನ ಮಾಡಿದರೆ ಒಬ್ಬರನ್ನು ಮಾತ್ರ ಸಮಾಧಾನ ಮಾಡಬಹುದು. ನಂತರ ಮಾಡುವುದಾಗಿ ಹೇಳಿ ಎಲ್ಲರನ್ನೂ ಚುನಾವಣೆ ಕೆಲಸಕ್ಕೆ ಹಚ್ಚಬಹುದು ಎಂಬ ಚಿಂತನೆ ಪಕ್ಷದಲ್ಲಿ ನಡೆದಿದೆ. ಆದರೆ, ಚುನಾವಣೆ ನಂತರ ಕಾಂಗ್ರೆಸ್‌ ಗೆದ್ದು ಶಾಸಕರಾದವರೇ ಅಧ್ಯಕ್ಷನಾಗುತ್ತೇನೆ ಎಂದರೆ ಹೇಗೆ ಎಂಬ ಭಯ ಮುಖಂಡರನ್ನು ಕಾಡುತ್ತಿದೆ.

ಸರ್ಕಾರದ ಮಟ್ಟದಲ್ಲಿ ಬಿಟಿಡಿಎಗೆ ಉಪಚುನಾವಣೆಗೆ ಮುನ್ನ ನೇಮಿಸಿದರೆ ಅನುಕೂಲವೋ, ನಂತರ ನೇಮಕ ಮಾಡಿದರೆ ಅನುಕೂಲವೋ ಎಂಬ ಚರ್ಚೆ ನಡೆದಿದೆ. 

ಸಾರ್ವಜನಿಕರಿಗೆ ಸಂಕಷ್ಟ:

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ತಿಂಗಳ ನಂತರ ಬಿಟಿಡಿಎ ಅಧ್ಯಕ್ಷರ ನೇಮಕಾತಿ ನಡೆದಿತ್ತು. ಈಗ ಉಪಚುನಾವಣೆ ಮುಗಿಯುವವರೆಗೆ ಮುಂದೂಡಿದರೆ, ಮುಳುಗಡೆ ಸಂತ್ರಸ್ತರು ಅಲೆದಾಟ ನಡೆಸಬೇಕಾಗುತ್ತದೆ.

ಸಂತ್ರಸ್ತರಿಗೆ ನಿವೇಶನ ನೀಡುವ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಸಂತ್ರಸ್ತರನ್ನು ಅಲೆದಾಡಿಸುತ್ತಾರೆ ಎಂಬ ದೂರುಗಳು ಕೇಳಿ ಬರುತ್ತವೆ. ಅಧ್ಯಕ್ಷರ ನೇಮಕ ಆಗದಿದ್ದರೆ, ಜನರ ಆಕ್ರೋಶವೂ ಹೆಚ್ಚಾಗಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.