ADVERTISEMENT

ಬಿಜೆಪಿ ಯೋಜನೆ ವಿರೋಧಿಸುವುದೇ ಕಾಂಗ್ರೆಸ್ ಅಭ್ಯಾಸ: ಬಿ.ವೈ.ವಿಜಯೇಂದ್ರ

ಕಾರ್ಯಕರ್ತರ ಸಂಘಟನಾತ್ಮಕ ಸಭೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:37 IST
Last Updated 14 ಫೆಬ್ರುವರಿ 2026, 6:37 IST
ಬೀಳಗಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಹಾಗೂ ವಿಬಿ ಜಿ ರಾಮ್ ಜಿ ಜನಜಾಗೃತಿ ಸಭೆಯನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು
ಬೀಳಗಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಹಾಗೂ ವಿಬಿ ಜಿ ರಾಮ್ ಜಿ ಜನಜಾಗೃತಿ ಸಭೆಯನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು   

ಬೀಳಗಿ: ‘ಹೊಸ ಶಿಕ್ಷಣ ನೀತಿ, ಕಿಸಾನ್ ಸಮ್ಮಾನ್ ಯೋಜನೆ, ಒಂದು ದೇಶ ಒಂದು ಚುನಾವಣೆ, ವಕ್ಫ್ ಕಾಯ್ದೆ ತಿದ್ದುಪಡಿ, ಜನೌಷಧದಂತಹ ಹಲವು ಜನಪ್ರಿಯ ಯೋಜನೆಗಳನ್ನು ನೀಡಿದ ಕೇಂದ್ರ ಸರ್ಕಾರದ ಯಾವ ಯೋಜನೆಯನ್ನೂ ಕಾಂಗ್ರೆಸ್ ಒಪ್ಪಿಕೊಂಡಿಲ್ಲ. ಎಲ್ಲವನ್ನೂ ವಿರೋಧಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳಗಿ ಮತಕ್ಷೇತ್ರದ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಮತ್ತು ಬಿಎಲ್‌ಎ –2 ಕಾರ್ಯಾಗಾರ ಹಾಗೂ ವಿಬಿ ಜಿ ರಾಮ್ ಜಿ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸೇತರ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದನ್ನು ಸಹಿಸಿಕೊಳ್ಳಲಾರದ ಕಾಂಗ್ರೆಸ್ ಪಕ್ಷವು, ಗ್ಯಾರಂಟಿ ಯೋಜನೆಗಳ ಮೇಲೆ ಬಡವರು ಬದುಕಬೇಕು ಎನ್ನುವ ನೀತಿ ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ವಿಬಿ ಜಿ ರಾಮ್ ಜಿ ಯೋಜನೆಯ ಪ್ರಕಾರ ಗ್ರಾಮ ಸಭೆಗಳಲ್ಲಿ ಏನು ತೀರ್ಮಾನವಾಗುತ್ತದೆಯೋ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಜನರಿಗೆ ತಪ್ಪು ಕಲ್ಪನೆ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಾಗಬೇಕು. ಎದುರಾಳಿ ಪಕ್ಷವರನ್ನು ದೂಳಿಪಟ ಮಾಡಬೇಕು’ ಎಂದು ಹುರಿದುಂಬಿಸಿದರು.

ಪಕ್ಷದ ಮುಖಂಡ ಮುರುಗೇಶ ನಿರಾಣಿ ಮಾತನಾಡಿ, ‘ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ‘ಮನರೇಗಾ ಹೆಸರು ಬದಲಾವಣೆಯಾಗಿರುವುದು ಇದೇ ಮೊದಲಲ್ಲ. ಬಿಜೆಪಿಯಿಂದ ನರೇಗಾ ಯೋಜನೆ ಬಲಪಡಿಸುವ ಕಾರ್ಯ ನಡೆದಿದೆಯೇ ಹೊರತು ರದ್ದುಗೊಳಿಸುವುದಲ್ಲ’ ಎಂದರು.

ಪಕ್ಷದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮನೆ ಮನೆಗೆ ಮದ್ಯ ಕೊಡುವ ಆರನೇ ಗ್ಯಾರಂಟಿ ನೀಡಿದರೂ ಆಶ್ಚರ್ಯ ಪಡಬೇಕಿಲ್ಲ’ ಎಂದರು.

ಶಾಸಕ ಸಿದ್ದು ಸವದಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿಧಾನ ಶಹಾಪುರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖೋತ, ತಾಲ್ಲೂಕು ಮಂಡಲದ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಲ್ಲಪ್ಪ ಶಂಭೂಜಿ, ವೀರಣ್ಣ ತೋಟದ, ವಿಠ್ಠಲ ಯತ್ನಟ್ಟಿ, ನಿಂಗಪ್ಪ ಧಂದರಗಿ ಇದ್ದರು.

ಬಾಗಲಕೋಟೆ ಉಪಚುನಾವಣೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗಳು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗುತ್ತವೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.