
ರಬಕವಿ ಬನಹಟ್ಟಿ: ಸಮೀಪದ ಕುಲಹಳ್ಳಿ ಗ್ರಾಮದ ರೈತ ವಿಜೂಗೌಡ ಕವಳ್ಳಿ ತಮ್ಮಅರ್ಧ ಎಕರೆ ಭೂ ಪ್ರದೇಶದಲ್ಲಿ ಗಜ್ಜರಿ ಬೆಳೆದು ಕೇವಲ ಒಂದೂವರೆ ತಿಂಗಳಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಂಡಿದ್ದಾರೆ. ಗಜ್ಜರಿ ಬೆಳೆಗೆ ಕಡಿಮೆ ಖರ್ಚು ಇದ್ದು ಲಾಭ ಮಾತ್ರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಸಪ್ಟೆಂಬರ್ ಕೊನೆಯ ವಾರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದರು. ಡಿಸೆಂಬರ್ ತಿಂಗಳ ಆರಂಭದಲ್ಲಿ ಅವುಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ಕಳುಹಿಸುತ್ತಿದ್ದಾರೆ.
ನಾಟಿ ಮಾಡಿದ ಎರಡು ತಿಂಗಳಲ್ಲಿ ಗಜ್ಜರಿಗಳು ಬರಲಾರಂಭಿಸುತ್ತವೆ. ಅವುಗಳನ್ನು ಅವಶ್ಯಕತೆಗೆ ತಕ್ಕಂತೆ ಅಗೆದು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸಲಾಗುವುದು. ಎರಡು ತಿಂಗಳಲ್ಲಿ ಅರ್ಧ ಎಕರೆಗೆ ಹದಿನೈದರಿಂದ ಇಪ್ಪತ್ತು ಕೆ.ಜಿ.ಯಷ್ಟು ಯೂರಿಯಾ ಗೊಬ್ಬರ ನಂತರ ಮೂರು ನಾಲ್ಕು ಬಾರಿ ನೀರು ನೀಡಲಾಗಿದೆ. ಎರಡು ಬಾರಿ ಕಳೆ ತೆಗೆಯಲಾಗಿದೆ. ಈ ಪ್ರಮಾಣದಲ್ಲಿ ಬೆಳೆಯನ್ನು ನಿರ್ವಹಣೆ ಮಾಡಿದರೆ ಉತ್ತಮ ಬೆಳೆಯನ್ನು ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ವಿಜೂಗೌಡ ಕವಳ್ಳಿ.
ರಬಕವಿ ಬನಹಟ್ಟಿ, ಜಮಖಂಡಿ ಮತ್ತು ಮುಧೋಳ ಮಾರುಕಟ್ಟೆಗೆ ದಿನನಿತ್ಯ ಗಜ್ಜರಿಯನ್ನು ತೆಗೆದುಕೊಂಡು ಹೋಗುತ್ತಾರೆ. ಗಜ್ಜರಿ ಬೆಳೆಗೆ ಸವಳು ನೀರು ಅತ್ಯಂತ ಯೋಗ್ಯವಾಗಿರುತ್ತದೆ. ಸವಳು ನೀರಿನಿಂದ ಗಜ್ಜರಿ ಹೆಚ್ಚು ಸಿಹಿಯಾಗುತ್ತದೆ ಮತ್ತು ಉತ್ತಮ ರೀತಿಯಲ್ಲಿ ಬಣ್ಣ ಬರುತ್ತದೆ ಎನ್ನುತ್ತಾರೆ ವಿಜೂಗೌಡ ಕವಳ್ಳಿ.
ದಿನಾಲು ಮಾರುಕಟ್ಟೆಗೆ ಒಂದುವರೆ ಕ್ವಿಂಟಲ್ ನಷ್ಟು ಗಜ್ಜರಿಯನ್ನು ಕಳುಹಿಸುತ್ತೇವೆ. ಇಪ್ಪತ್ತು ಕೆ.ಜಿ. ಯಷ್ಟು ಒಂದು ಚೀಲದ ಗಜ್ಜರಿಗೆ ಮಾರುಕಟ್ಟೆಯಲ್ಲಿ ₹ 600 ರಿಂದ ₹750 ಬೆಲೆ ಬರುತ್ತದೆ. ಕೇವಲ ಒಂದು ತಿಂಗಳಿನ ಬೆಳೆಯಲ್ಲಿ ಲಕ್ಷಾಂತರ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ತರಕಾರಿಗಳನ್ನು ಬೆಳೆಯುವುದರಿಂದ ಉತ್ತಮ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ರೈತರಿಗೆ ದಿನನಿತ್ಯ ಹಣ ದೊರೆಯುತ್ತದೆ. ಅದೇ ರೀತಿಯಾಗಿ ಜೂನ್ ತಿಂಗಳಲ್ಲಿಯೂ ಕೂಡಾ ಗಜ್ಜರಿಯನ್ನು ಬೆಳೆಯುತ್ತೇವೆ. ಈ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆದುಕೊಳ‍್ಳಬಹುದಾಗಿದೆ.(ಹೆಚ್ಚಿನ ಮಾಹಿತಿಗಾಗಿ: 99006 65201)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.