
ಬಾಗಲಕೋಟೆ: ರಾಸಾಯನಿಕಗಳ ಬಳಕೆ, ಸಸ್ಯರೋಗ ಮತ್ತು ಕೀಟ ನಿರ್ವಹಣೆ ಮುಂತಾದ ಸಮಗ್ರ ಕೃಷಿ ಪದ್ಧತಿಯಿಂದ ಮೆಣಸಿನಕಾಯಿ ಬೆಳೆದರೆ ರೈತರು ಅಧಿಕ ಆದಾಯ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಭಿಪ್ರಾಯಪಟ್ಟರು.
ತೋಟಗಾರಿಕೆ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಮೆಣಸಿನಕಾಯಿ ಬೆಳೆ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೆಣಸಿನಕಾಯಿ ದೇಶದ ಕೆಲವು ರಾಜ್ಯಗಳಲ್ಲಿ ಪ್ರಮುಖವಾಗಿ ಬೆಳೆದರೂ ರಫ್ತು ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದು ಹೆಮ್ಮೆಯ ವಿಷಯವಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಬೆಳೆಯಾಗಿರುವ ಮೆಣಸಿನಕಾಯಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ತೋವಿವಿಯಿಂದ ಬಿಡುಗಡೆಯಾದ ಕೃಷ್ಣಪ್ರಭಾ ರುದ್ರ ಬಗ್ಗೆ ಮೆಚ್ಚುಗೆ ಸೂಸಿದ ಅವರು, ಮೆಣಸಿನಕಾಯಿ ಕೇವಲ ಆಹಾರಕ್ಕಷ್ಟೇ ಅಲ್ಲ, ಸೌಂದರ್ಯ ಸಾಧನ, ಔಷಧ ತಯಾರಿಕೆ ಸೇರಿದಂತೆ ವಿವಿಧೆಡೆ ಬಳಸುವುದರಿಂದ ಅನೇಕ ಉದ್ದಿಮೆಗಳು ತಲೆಯೆತ್ತಿವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ‘ಮೆಣಸಿನಕಾಯಿ ಕೃಷಿಯಲ್ಲಿ ಸಂಶೋಧನೆಗಳು ಆಗಿದ್ದರೂ ಇನ್ನೂ ಸವಾಲುಗಳೂ ಸಹ ಇವೆ. ಉತ್ತಮ ಗುಣಮಟ್ಟದ ಬೀಜ, ಸಮಗ್ರ ಕೃಷಿ ಪದ್ಧತಿ ಅವಶ್ಯವಾಗಿವೆ. ಸರ್ಕಾರದ ಸೌಲಭ್ಯಗಳು ಹಾಗೂ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ರೈತರು ಮೆಣಸಿನಕಾಯಿ ಕೃಷಿ ಮಾಡಬೇಕು’ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಮಾತನಾಡಿ, ಈ ಸಮ್ಮೇಳನದಲ್ಲಿ ಮಂಡನೆಯಾದ ಪ್ರಬಂಧಗಳು ಪ್ರಾಯೋಗಿಕವಾಗಿವೆ. ಈ ಸಮ್ಮೇಳನದಿಂದ ರೈತರು ಮತ್ತು ಉದ್ಯಮಿಗಳಿಗೆ ಬಹಳಷ್ಟು ಪ್ರಯೋಜನ ಉಂಟಾಗಿದೆ’ ಎಂದರು.
ನವದೆಹಲಿ ಭಾ.ಅ.ಕೃ.ಪ ಮಾಜಿ ಉಪಮಹಾನಿರ್ದೇಶಕ ಎನ್.ಕೆ.ಕೃಷ್ಣಕುಮಾರ, ಪ್ರತಿ ರಾಜ್ಯದಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಬೆಳೆಗಳನ್ನು ಉತ್ಪಾದಿಸಲಾಗುತ್ತದೆ. ಮೆಣಸಿನಕಾಯಿ ಮಾರಾಟ, ರಫ್ತಿನಲ್ಲಿ ರೈತರಿಗೆ ಇರುವ ಸವಾಲುಗಳ ಕುರಿತು ಮಾತನಾಡಿದರು.
ಔರಂಗಬಾದ್ ಎಟಿಪಿಬಿಆರ್ ನಿರ್ದೇಶಕ ಸುರಿಂದರ್ ಟಿಕೂ, ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ವಿವರಿಸಿದರು. ಸಮ್ಮೇಳನ ಕಾರ್ಯದರ್ಶಿ ವಸಂತ ಗಾಣಿಗೇರ, ಫಕ್ರುದ್ದೀನ್, ಎಟಿಬಿಪಿಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪರ್ಣಾ ತಿವಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.