ಮಹಾಲಿಂಗಪುರ: ಪಟ್ಟಣದ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ 28 ಜನ ಪೌರ ಕಾರ್ಮಿಕರು ಎರಡು ತಿಂಗಳಿಂದ ವೇತನ ಇಲ್ಲದೆ ಪರದಾಡುತ್ತಿದ್ದರೆ ಈ ವೇತನ ಪಾವತಿಸಲು ಪುರಸಭೆಗೆ ಹೊರೆಯಾಗಿ ಪರಿಣಮಿಸಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿನ ಪಾಲಿಕೆ, ನಗರಸಭೆ ಹಾಗೂ ಪುರಸಭೆಯಲ್ಲಿ ಹಲವು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಆದೇಶ ಹೊರಡಿಸಿದ್ದರು. ಅದರಂತೆ ಪಟ್ಟಣದ ಪುರಸಭೆಯಲ್ಲಿ 2023ರ ಏ.1 ರಂದು 29 ಜನ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಈ ಪೈಕಿ ಮಹಿಳಾ ಪೌರಕಾರ್ಮಿಕರೊಬ್ಬರು ಕಳೆದ ಆಗಸ್ಟ್‌ನಲ್ಲಿ ನಿಧನರಾಗಿದ್ದಾರೆ.
ಸರ್ಕಾರ ಕಾಯಂ ಮಾಡಿದ ನಂತರ ಸ್ವಂತ ನಿಧಿಯಿಂದಲೇ ಪೌರಕಾರ್ಮಿಕರಿಗೆ ವೇತನ ನೀಡಲು ಆದೇಶ ಮಾಡಿದ್ದರಿಂದ ಪುರಸಭೆಯು ಆರಂಭದ ಆರು ತಿಂಗಳು ವೇತನ ನೀಡಿರಲಿಲ್ಲ. ನಂತರ ಅಕ್ಟೋಬರ್ ತಿಂಗಳಲ್ಲಿ ಒಟ್ಟು ₹42.19 ಲಕ್ಷ (ಆರು ತಿಂಗಳು ಸೇರಿ) ಪೌರಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿತ್ತು. ಅಲ್ಲಿಂದ ವೇತನ ಪಾವತಿಸುತ್ತ ಬಂದಿದ್ದ ಪುರಸಭೆಗೆ ಕಳೆದ ಆಗಸ್ಟ್ ನಲ್ಲಿ 7ನೇ ವೇತನ ಆಯೋಗ ಜಾರಿಯಾದ ಮೇಲೆ ಹೊರೆಯಾಗಿ ಪರಿಣಮಿಸಿದೆ.
ಪ್ರತಿ ತಿಂಗಳು ಅಂದಾಜು ₹7 ಲಕ್ಷವರೆಗೆ ವೇತನ ಪಾವತಿಸುತ್ತಿದ್ದ ಪುರಸಭೆ 7ನೇ ವೇತನ ಜಾರಿಯಿಂದ ಅಂದಾಜು ₹10.50 ಲಕ್ಷ ಪಾವತಿಸಬೇಕಿದೆ. ಪೌರಕಾರ್ಮಿಕರಿಗೆ ಕಳೆದ ಅಕ್ಟೋಬರ್, ನವೆಂಬರ್ ತಿಂಗಳ ವೇತನ ನೀಡಿಲ್ಲ. ಈಗ ಡಿಸೆಂಬರ್ ತಿಂಗಳು ಮುಗಿದಿದ್ದು, ಈ ವೇತನವೂ ಸಿಗುವ ಅನುಮಾನ ಕಾಡುತ್ತಿದೆ.
ಪೌರಕಾರ್ಮಿಕರಿಗೆ ಎಸ್‍ಎಫ್‍ಸಿ ಮುಕ್ತನಿಧಿ ಹಾಗೂ ಜನರಲ್ ಫಂಡ್‍ನಿಂದ ವೇತನ ನೀಡಲು ಆದೇಶಿಸಲಾಗಿದೆ. ಎಸ್‍ಎಫ್‍ಸಿ ಮುಕ್ತನಿಧಿಯಿಂದ 3 ತಿಂಗಳು ಮಾತ್ರ ವೇತನ ನೀಡಲು ಸಾಧ್ಯ. ಉಳಿದ ಮೊತ್ತ ಜನರಲ್ ಫಂಡ್‍ನಿಂದ ನೀಡಬೇಕು. ಮನೆ ಕರ, ಅಭಿವೃದ್ಧಿ ಕರ, ಟ್ರೇಡ್ ಲೈಸನ್ಸ್ ಸೇರಿ ಜನರಲ್ ಫಂಡ್‍ನಲ್ಲಿ ಅಂದಾಜು ₹2.50 ರಿಂದ ₹3 ಕೋಟಿ ಆಯವ್ಯಯ ಇರುವ ಪುರಸಭೆಯು ಸ್ಥಳೀಯ ಅಭಿವೃದ್ಧಿ ಕಾಮಗಾರಿ, ನಿರ್ವಹಣೆ ಸರಿದೂಗಿಸಿಕೊಂಡು ಪೌರಕಾರ್ಮಿಕರಿಗೆ ವೇತನ ನೀಡಬೇಕಿದೆ.
- ಅನುದಾನದ ಕೊರತೆಯಿಂದಾಗಿ ಪೌರಕಾರ್ಮಿಕರಿಗೆ ವೇತನ ನೀಡಲು ಕಷ್ಟವಾಗಿದೆ. ಕರ ವಸೂಲಿ ಮಾಡಿ ವೇತನ ಪಾವತಿಸಬೇಕಿದೆ. ಕೂಡಲೇ ಬಾಕಿ ತಿಂಗಳ ವೇತನ ಪಾವತಿಸಲಾಗುವುದುಈರಣ್ಣ ದಡ್ಡಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.