
ಜಮಖಂಡಿ ಬಾಲಕರ ಸರ್ಕಾರಿ ಪಿ.ಬಿ.ಪದವಿ ಪೂರ್ವ ಕಾಲೇಜಿನ ಶೌಚಾಲಯ
ಜಮಖಂಡಿ: ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಕಾಲೇಜಿನ ಆವರಣದ ತುಂಬ ಕಸವೋ ಕಸ, ಕಾಲೇಜಿಗೆ ರಸ್ತೆಯಿಲ್ಲ, ಕಂಪೌಂಡ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲ, ಸಿಡಿಸಿ ಕಮೀಟಿ ಇಲ್ಲ, ಕಾಯಂ ಭೋಧಕರೂ ಇಲ್ಲ. ಆದರೆ ಎಲ್ಲ ಇಲ್ಲಗಳ ನಡುವೆ 420 ಬಡ ವಿದ್ಯಾರ್ಥಿಗಳು ಮಾತ್ರ ಇದ್ದಾರೆ.
ಹೃದಯ ಭಾಗದಲ್ಲಿರುವ ಬಾಲಕರ ಸರ್ಕಾರಿ ಪಿ.ಬಿ.ಪದವಿ ಪೂರ್ವ ಕಾಲೇಜಿನ ಸ್ಥಿತಿ ಹೇಳತೀರದಾಗಿದೆ. ಇಲ್ಲಿನ ಪ್ರಾಚಾರ್ಯರು ಕಣ್ಣಿದ್ದು ಕುರುಡರಾಗಿದ್ದಾರೆ, ನಾಲ್ಕು ಎಕರೆ ಕಾಲೇಜಿನ ಸ್ಥಳವಿದೆ, ಅದರ ಸ್ವಚ್ಚತೆ ಮಾಡಿಕೊಂಡು ಬಳಕೆ ಮಾಡಲು ಪ್ರಾಚಾರ್ಯರು ಮುಂದಾಗಿಲ್ಲ, ಶಾಲೆಗೆ ಹೋಗಲು ಇರುವ ದಾರಿ ಬಿಟ್ಟರೆ ಶಾಲೆಯ ಮುಂದೆ ಹಾಗೂ ಹಿಂದೆ ಎಲ್ಲ ಕಡೆಗೂ ಕಸದ ರಾಶಿ ರಾರಾಜಿಸುತ್ತಿದೆ.
ಹಲವಾರು ಕಡೆಗಳಲ್ಲಿ ಸರ್ಕಾರಿ ಕಾಲೇಜಿಗೆ ಸ್ಥಳದ ಕೊರತೆ ಇರುತ್ತದೆ. ಆದರೆ ಇಲ್ಲಿ ನಾಲ್ಕು ಎಕರೆ ಸ್ಥಳವಿದ್ದರೂ ಅದನ್ನು ಬಳಸಿಕೊಂಡು ಆಟದ ಮೈದಾನ ಮಾಡಿಕೊಳ್ಳಲು ಕಾಲೇಜಿಗೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ವಿಪರ್ಯಾಸ. 420ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಒಂದು ಶೌಚಾಲಯ ಮಾತ್ರ ಇದೆ, ವಿದ್ಯಾರ್ಥಿಗಳು ಶೌಚಕ್ಕೆ ಹೋಗಲು ಸರದಿ ನಿಲ್ಲುವ ಪರಿಸ್ಥಿತಿ ಇದೆ. ಈ ಶೌಚಾಲಯವೂ ಗಬ್ಬೆದ್ದು ನಾರುತ್ತಿದೆ, ಶೌಚಾಲಯದಲ್ಲಿ ಕಲ್ಲುಗಳು, ಸಾರಾಯಿ ಬಾಟಲಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಬಿದ್ದಿವೆ. ವಿದ್ಯಾರ್ಥಿಗಳು ಮುಗು ಮುಚ್ಚಿಕೊಂಡು ಅದನ್ನೆ ಬಳಸುತ್ತಿದ್ದಾರೆ.
ಕಾಲೇಜಿಗೆ ಕಂಪೌಂಡ್ ಇಲ್ಲದ ಕಾರಣ ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕಂಪೌಂಡ್ ಅವಶ್ಯಕತೆ ಇದೆ ಹಾಗೂ ರಾತ್ರಿ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲ, ಲೈಟ ಹಾಕಲು ನಗರಸಭೆ ಅಧಿಕಾರಿಗಳಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ. ಮುಖ್ಯರಸ್ತೆಯಿಂದ ಕಾಲೇಜಿಗೆ ಬರಲು ರಸ್ತೆ ಇಲ್ಲವಾಗಿದೆ. 25 ಅಡಿ ರಸ್ತೆ ಇದ್ದರೂ ರಸ್ತೆ ಒತ್ತುವರಿಯಾಗಿದೆ. ಒತ್ತುವರಿಯಾಗಿರುವ ರಸ್ತೆಯನ್ನು ತೆರವು ಮಾಡಬೇಕು, ರಾಜರ ಕಾಲದ ಒಂದು ತೆರೆದ ಬಾವಿ ಇದ್ದು ಅದರ ನೀರನ್ನು ಬಳಸಲಾಗುತ್ತಿದೆ. ಒಂದು ಕೊಳವೆ ಬಾವಿ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿಗೆ ಪಿಲ್ಟರ್ ಅವಶ್ಯಕತೆ ಇದೆ.
‘ಭೋಧಕರು ಸೇರಿ ಒಟ್ಟು 16 ಜನ ಸಿಬ್ಬಂದಿ ಮುಂಜೂರಾತಿ ಇದೆ. ಆದರೆ ಇಲ್ಲಿ ಇರುವುದು ಕೇವಲ 7 ಸಿಬ್ಬಂದಿ ಮಾತ್ರ. ಅದರಲ್ಲಿ ಒಬ್ಬರನ್ನು ಬಾಗಲಕೋಟ ಉಪನಿರ್ದೇಶಕರು ತಮ್ಮ ಕಚೇರಿಗೆ ಡೆಪ್ಯುಟೇಶನ ಮೇಲೆ ಹಾಕಿಕೊಂಡಿದ್ದಾರೆ. ಗೆಸ್ಟ್ ಟೀಚರ್ಸ್ ನೇಮಕ ಮಾಡಿಕೊಂಡು ಪಾಠಬೋಧನೆ ಮಾಡುವಂತಾಗಿದೆ. ಆವರಣದಲ್ಲಿ ವಿಪರಿತ ಕಸ ಬೆಳೆದಿರುವದರಿಂದ ಸೊಳ್ಳೆಗಳ ಕಾಟ ಬಹಳಷ್ಟಿದೆ. ಸಣ್ಣ ಸಣ್ಣ ಸೊಳ್ಳೆಗಳು ಕಡಿಯುವುದರಿಂದ ಸರಿಯಾಗಿ ಪಾಠವನ್ನು ಕೇಳಲು ಆಗುತ್ತಿಲ್ಲ’ ಎಂದು ವಿದ್ಯಾರ್ಥಿ ತಿಳಿಸಿದರು.
ಸರ್ಕಾರಿ ಕಾಲೇಜಿನಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಇದ್ದರೂ ಜನಪ್ರತಿನಿಧಿಗಳು ಮಾತ್ರ ಶಾಲೆಗೆ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಸಿಡಿಸಿ ಕಮಿಟಿ ರಚನೆ ಮಾಡಲು ನಾಲ್ಕು ಭಾರಿ ಶಾಸಕ ಜಗದೀಶ ಗುಡಗುಂಟಿಯವರಿಗೆ ಪತ್ರವನ್ನು ನೀಡಿದರು ಯಾವುದೇ ಸಿಡಿಸಿ ರಚನೆ ಮಾಡುವ ಆಸಕ್ತಿ ತೋರುತ್ತಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದರು.
ನಗರದ ಮಧ್ಯದಲ್ಲಿ ಕಾಲೇಜು ಇರುವುದರಿಂದ ಹೊರಗಿನ ಜನ ಬಂದು ಕಿರಿಕಿರಿ ಮಾಡುತ್ತಾರೆ. ನಮಗೆ ಮುಖ್ಯವಾಗಿ ಕಂಪೌಂಡ್ ಅವಶ್ಯಕತೆ ಇದೆ. ಆವರಣವನ್ನು ಸ್ವಚ್ಚತೆ ಮಾಡಿಕೊಳ್ಳುತ್ತೇವೆಸುರೇಶ ಬಿರಾದಾರ,ಪ್ರಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.