ADVERTISEMENT

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ: ಮಾಜಿ ಸಚಿವ ಎಸ್.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:13 IST
Last Updated 15 ಸೆಪ್ಟೆಂಬರ್ 2025, 4:13 IST
ಬಾಗಲಕೋಟೆ ಜಿಲ್ಲಾ ರೆಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು
ಬಾಗಲಕೋಟೆ ಜಿಲ್ಲಾ ರೆಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು   

ಬಾಗಲಕೋಟೆ: ‘ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಧ್ಯೇಯದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾದ ಪರಿಶ್ರಮ ಅಗತ್ಯವಾಗಿದೆ’ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಭಾನುವಾರ ಜರುಗಿದ ಜಿಲ್ಲಾ ರೆಡ್ಡಿ ನೌಕರರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು’ ಎಂದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ‘ಸಂಘವು ಸಮಾಜದ ನೌಕರರ ಅಭಿವೃದ್ಧಿಗೆ ಸಹಕಾರಿಯಾಗಲಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿರಲಿ’ ಎಂದು ಹೇಳಿದರು.

ADVERTISEMENT

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಾಲಾಜಿ ಶುಗರ್ಸ್ ಅಧ್ಯಕ್ಷ ಎಚ್.ಎಲ್.ಪಾಟೀಲ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ‘ಸಹಕಾರಿ ರಂಗದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಆರ್.ಎಸ್.ಪಾಟೀಲ, ‘ಮಾರ್ಚ್ ಅಂತ್ಯಕ್ಕೆ ₹17.22 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ12 ರಷ್ಟು ಲಾಭಾಂಶ ಹಂಚಿಕೆ ಮಾಡಲಾಗುವುದು’ ಎಂದರು.

ಆಧ್ಯಾತ್ಮ ಚಿಂತಕ ಪ್ರದೀಪ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಶೇ90 ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನು, ಸಮಾಜದ ನಿವೃತ್ತ ನೌಕರರು, ದಾನಿಗಳನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕ ಅಶೋಕ ಎಮ್ಮಿ ಸ್ವಾಗತಿಸಿದರು. ನಿರ್ದೇಶಕ ಎಸ್.ಬಿ.ಮಾಚಾ ಸಂಘದ ಪ್ರಗತಿ ವಿವರಿಸಿದರು. ಸಂಜಯ ನಡುವಿನಮನಿ, ಪಾಂಡುರಂಗ ಸಣ್ಣಪ್ಪನವರ ನಿರೂಪಿಸಿದರು. ಉಮಾ ಕೆಳಗಿನಗೌಡರ ವಂದಿಸಿದರು.

‘₹25.37 ಲಕ್ಷ ಲಾಭ’

ಹುನಗುಂದ: ‘ಇಲ್ಲಿನ ಶ್ರೀ ಕನಕದಾಸ ಸೌಹಾರ್ದ ಪತ್ತಿನ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹25.37 ಲಕ್ಷ ನಿವ್ವಳ ಲಾಭಗಳಿಸಿದೆ’ ಎಂದು ಸಂಘದ ಅಧ್ಯಕ್ಷ ವೀರೇಶ ಉಂಡೋಡಿ ಹೇಳಿದರು.

ಪಟ್ಟಣದ ಸಂಘದ ಕಾರ್ಯಲಯದಲ್ಲಿ ಭಾನುವಾರ ನಡೆದ 16ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂಘವು ₹28.87 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಕಳೆದ ವರ್ಷ ₹80 ಕೋಟಿ ಆರ್ಥಿಕ ವ್ಯವಹಾರ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ₹5 ಕೋಟಿ ಠೇವಣಿ ಹೆಚ್ಚಾಗಿದ್ದು, ಇದು ಸಂಘದ ಪ್ರಗತಿಯನ್ನು ಸೂಚಿಸುತ್ತದೆ. ಠೇವಣಿದಾರರು ಹಾಗೂ ಸಿಬ್ಬಂದಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸದಸ್ಯರ ಸಲಹೆಯಂತೆ ಮುಂಬರುವ ದಿನಗಳಲ್ಲಿ ಶಾಖೆಗಳನ್ನು ಆರಂಭಿಸಲಾಗುವುದು’ ಎಂದರು.

ಮುಖ್ಯಕಾರ್ಯನಿರ್ವಾಹಕ ಭರಮಣ್ಣ ರಾಮವಾಡಗಿ ವರದಿ ವಾಚಿಸಿದರು.  ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರು, ನಿರ್ದೇಶಕರಾದ ಮಹಾಂತಗೌಡ ಪಾಟೀಲ, ನೀಲಪ್ಪ ತಪೇಲಿ, ನಾಗಪ್ಪ ಕಳ್ಳಿಗುಡ್ಡ, ಮಹಾಂತೇಶ ಮುಕ್ಕಣ್ಣವರ, ವಿಠ್ಠಲ ತಿಮ್ಮಾಪೂರ, ಮಲ್ಲಿಕಾರ್ಜುನ ಡಂಬಳ, ಲಕ್ಷ್ಮೀಬಾಯಿ ವಾಲಿಕಾರ, ಸಂಗಪ್ಪ ಚಿತ್ತವಾಡಗಿ ಇದ್ದರು.

‘ಶಾಸ್ತ್ರಿ ಸಂಘಕ್ಕೆ ₹8 ಲಕ್ಷ ಲಾಭ’

ಗುಳೇದಗುಡ್ಡ: ‘ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರ ಸಂಘ ಆರ್ಥಿಕ ಕ್ಷೇತ್ರವಾಗಿದ್ದೂ, ಪ್ರತಿವರ್ಷ ಹಲವು ಬಗೆಯ ಸಮಾಜಮುಖಿ ಕಾರ್ಯ ಮಾಡುತ್ತಿದೆ. ಪ್ರಸಕ್ತ ವರ್ಷ ಸಂಘ ₹8 ಲಕ್ಷ ಲಾಭ ಗಳಿಸಿ ಉತ್ತಮ ಪ್ರಗತಿ ಸಾಧಿಸಿದೆ’ ಎಂದು ಅಧ್ಯಕ್ಷ ಬಾಲಮುಕ್ಕುಂದ ತಾಪಡಿಯಾ ಹೇಳಿದರು.

ಅವರು ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರ ಸಂಘದ 10ನೇ ವರ್ಷದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಮಮಂದಿರ ಉದ್ಘಾಟನೆ ದಿನದಂದು ಜನಿಸಿದ ಮಗುವಿಗೆ ಸಂಘ ₹5 ಸಾವಿರ ಠೇವಣಿ ಇಟ್ಟಿದ್ದು, ಅದು 18 ವರ್ಷ ತುಂಬಿದ ಬಳಿಕ ಮಗುವಿಗೆ ₹25 ಸಾವಿರ ಲಭಿಸಲಿದೆ’ ಎಂದರು.

ಸಂಘದ ಉಪಾಧ್ಯಕ್ಷ ಪ್ರಶಾಂತ ಜವಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಶೇಷ ಠೇವು ಯೋಜನೆಗಳ ಬಿಡುಗಡೆ, ಉತ್ತಮ ಗ್ರಾಹಕರಿಗೆ ಹಾಗೂ ಸಹಕಾರ ಸಂಘದ ಶೇರುದಾರರ ಮಕ್ಕಳಿಗೆ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯಲ್ಲಿ ಶೇ90 ರಷ್ಟು ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶ್ರೀ, ಸಂಘದ ಎಲ್ಲ ನಿದೇಶಕರು ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.