ಬೀಳಗಿ: ‘ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಹಕಾರ ಸಂಸ್ಥೆಗಳಿಂದ ಅನುಕೂಲವಾಗಿದೆ. ಸಹಕಾರ ಸಂಸ್ಥೆಗಳು ಏಷ್ಟು ಲಾಭ ಗಳಿಸಿವೆ ಎನ್ನುವುದಕ್ಕಿಂತ ಏಷ್ಟು ಜನರಿಗೆ ಸಹಾಯ ಮಾಡಿವೆ ಎನ್ನುವುದು ಮುಖ್ಯ’ ಎಂದು ಸಿದ್ಧೇಶ್ವರ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಿದ್ಧೇಶ್ವರ ಸೌಹಾರ್ದ ಸಹಕಾರ ಸಂಘದ 19ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಸೌಹಾರ್ದ ಸಂಸ್ಥೆಗಳ ಮೇಲೆ ಕಡಿವಾಣ ಹಾಕಲು ಸರ್ಕಾರ ವಿಧೇಯಕ ಮಂಡನೆ ಮಾಡಿದ್ದು, ಇದರಿಂದ ಸೌಹಾರ್ದ ಸಂಸ್ಥೆಗಳ ಮುಖ್ಯಸ್ಥರು ಎಚ್ಚರಿಕೆಯಿಂದ ಸಂಸ್ಥೆಗಳನ್ನು ಮುನ್ನಡೆಸಬೇಕು. ಇಲ್ಲವಾದಲ್ಲಿ ಈ ಸಹಕಾರಿ ವಿಧೇಯಕದಿಂದ ಸೌಹಾರ್ದ ಸಂಸ್ಥೆಗಳು ಹಾನಿಯಲ್ಲಿ ಬರುವುದು ಕಡ್ಡಾಯ’ ಎಂದರು.
ಸಂಘದ ಉಪಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಮಾತನಾಡಿ, ‘ಸಿದ್ಧೇಶ್ವರ ಸಹಕಾರ ಸಂಘ 2024–25ನೇ ಸಾಲಿನಲ್ಲಿ ₹95.16 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಷೇರುದಾರರಿಗೆ ಶೇ10ರಷ್ಟು ಲಾಭಾಂಶ ವಿತರಿಸಲಾಗುವುದು. ಪ್ರಸ್ತುತ ₹4.78 ಕೋಟಿ ಷೇರು ಬಂಡವಾಳ ₹234.12 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕ ಎಂ.ಬಿ.ಕಂಬಿ ಮಾತನಾಡಿ, ‘ಈ ಬ್ಯಾಂಕ್‌ನ್ನು ಸೌಹಾರ್ದದಿಂದ ಪತ್ತಿನ ಸಹಕಾರ ಸಂಘವಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದ್ದೇವೆ. ಗ್ರಾಹಕರು ಅನುಮೊದನೆ ನೀಡಬೇಕು. ದಾಂಡೆಲಿಯಲ್ಲಿ ಹೊಸ ಶಾಖೆ ಪ್ರಾರಂಭ ಮಾಡುತ್ತೇವೆ’ ಎಂದು ತಿಳಿಸಿದರು.
ಎಸ್.ಬಿ.ಹಲವಾಯಿ ವಾರ್ಷಿಕ ವರದಿ ಮಂಡಿಸಿದರು. ಸೌಹಾರ್ದ ಸಹಕಾರಿಯ ಉತ್ತಮ ಗ್ರಾಹಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಉತ್ತಮ ಶಿಕ್ಷಕ ಯಲ್ಲಪ್ಪ ಮೇಟಿ ಅವರನ್ನು ಸನ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನಿರ್ದೇಶಕರಾದ ಸುಶೀಲ ಬೆಳಗಲಿ, ವಿ.ಟಿ. ಕೊಣಪ್ಪನವರ, ರಾಜು ಬೊರ್ಜಿ, ಸಿ.ಎಸ್. ಗೋಳಿಪಲ್ಲೆ, ಅಶೋಕ ಜೋಶಿ, ಎ.ಪಿ. ಜರಾಳಿ, ಎಚ್.ಎಂ. ಮುಜಾವರ, ವೈ. ಆರ್.ಮಾದರ, ಪದ್ಮಾ ಟಂಕಸಾಲಿ, ಪ್ರೇಮಾ ಹಲಗಲಿ, ಸಿಇಒ ಎಚ್.ಎನ್.ನೀಲನ್ನವರ, ವಿ.ಆರ್.ಹಿರೇನಿಂಗಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.