ADVERTISEMENT

ಮುಧೋಳ | 15 ಮಂದಿಗೆ ಕೋವಿಡ್-19 ಸೋಂಕು ದೃಢ, ಆರು ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 12 ಮೇ 2020, 7:57 IST
Last Updated 12 ಮೇ 2020, 7:57 IST
ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಮುಧೋಳದ ಆರು ಮಂದಿ ಮನೆಗೆ ಮರಳಿದರು.
ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಿಂದ ಮಂಗಳವಾರ ಮುಧೋಳದ ಆರು ಮಂದಿ ಮನೆಗೆ ಮರಳಿದರು.   

ಬಾಗಲಕೋಟೆ: ಅಹಮದಾಬಾದ್‌ನಿಂದ ವಾಪಸ್ ಮರಳಿದ್ದ 14 ಮಂದಿ ಸೇರಿದಂತೆ ಮುಧೋಳ ನಗರದ 15 ಮಂದಿಗೆ ಮಂಗಳವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಲಾಕ್ ಡೌನ್ ಗೆ ಮುಂಚೆ ಅಹಮದಾಬಾದ್ ಗೆ ತೆರಳಿದ್ದ ಮುಧೋಳದ 17 ಮಂದಿ ಅಲ್ಲಿಯೇ ಸಿಲುಕಿದ್ದರು. ಲಾಕ್ ಡೌನ್ ಸಡಿಲಗೊಂಡು ಅಂತಾರಾಜ್ಯ ಸಂಚಾರಕ್ಕೆ ಅವಕಾಶ ದೊರೆತ ನಂತರ ಮಹಾರಾಷ್ಟ್ರದಿಂದ ನಿಪ್ಪಾಣಿ ಮೂಲಕ ಮುಧೋಳಕ್ಕೆ ಮರಳಿದ್ದರು. ಗುಜರಾತ್‌ನಲ್ಲಿ ಇದ್ದ ವೇಳೆ ಎಲ್ಲರನ್ನೂ ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿತ್ತು. ಅಲ್ಲಿ ನೆಗೆಟಿವ್ ಬಂದಿತ್ತು. ಮೂರು ದಿನಗಳ ಹಿಂದೆ ಮುಧೋಳ ನಗರಕ್ಕೆ ಬಂದ ಇವರನ್ನು ತಾಲ್ಲೂಕು ಆಡಳಿತ ಕ್ವಾರೆಂಟೈನ್ ಗೆ ಒಳಪಡಿಸಿ ಅವರ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಿತ್ತು. ಅವರಲ್ಲಿ 14 ಮಂದಿಗೆ ಪಾಸಿಟಿವ್ ಬಂದಿದೆ.

ADVERTISEMENT

ಮುಧೋಳದ ವಡ್ಡರ ಓಣಿಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಯಾವುದೇ ಪ್ರವಾಸದ ಇತಿಹಾಸವಿಲ್ಲದ ಈ ವ್ಯಕ್ತಿಗೆ ಸ್ವಂತ ಮನೆ ಇಲ್ಲ. ಬಸ್ ನಿಲ್ದಾಣ, ದೇವಸ್ಥಾನದಲ್ಲಿ ಮಲಗುತ್ತಿದ್ದರು. ಹೀಗಾಗಿ ಅವರಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ಗೊತ್ತಾಗಿಲ್ಲ. ಇದು ಸೋಂಕು ಸಮುದಾಯಕ್ಕೆ ಹರಡಿರುವ ದ್ಯೋತಕವೇ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಆರು ಮಂದಿ ಬಿಡುಗಡೆ:ಕೋವಿಡ್-19 ಸೋಂಕು ದೃಢಪಟ್ಟು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮುಧೋಳದ ಆರು ಮಂದಿ ಮಂಗಳವಾರ ಗುಣಮುಖರಾಗಿ ಮನೆಗೆ ತೆರಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಫ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆ ಸಂದರ್ಭದಲ್ಲಿ ಆರು ಮಂದಿಯನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಶುಶ್ರೂಷಕರಿಗೆ ಹೂಮಳೆ:ಇದೇ ವೇಳೆ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕ ಸಿಬ್ಬಂದಿಗೆ ವೈದ್ಯರು ಹೂ ಮಳೆಗೆರೆದು ಅಭಿನಂದಿಸಿದರು. ಕೋವಿಡ್-19 ಸೋಂಕಿನಿಂದ ಗುಣಮುಖರಾದವರಿಗೆ ಶುಶ್ರೂಷಕರಿಂದಲೇ ಪ್ರಮಾಣಪತ್ರ ಕೊಡಿಸಲಾಯಿತು.

ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಪ್ರಕಾಶ ಬಿರಾದಾರ, ತಜ್ಞ ವೈದ್ಯ ಡಾ.ಚಂದ್ರಕಾಂತ ಜವಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.