ADVERTISEMENT

ಬಾಗಲಕೋಟೆ | ಸೋಂಕು ತಗುಲಿ ಮೃತಪಟ್ಟರೆ ಮಾತ್ರ ಪರಿಹಾರ!

ಕೋವಿಡ್–19 ಕ‌ರ್ತವ್ಯ ನಿರ್ವಹಣೆ; ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟನೆ

ವೆಂಕಟೇಶ್ ಜಿ.ಎಚ್
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಪ್ರಭಾವತಿ ಹಂಗರಗಿ
ಪ್ರಭಾವತಿ ಹಂಗರಗಿ   

ಬಾಗಲಕೋಟೆ: ಸರ್ಕಾರದ ಆದೇಶದಂತೆ ಕೋವಿಡ್–19 ಕರ್ತವ್ಯದಲ್ಲಿರುವಾಗ ಸೋಂಕು ತಗುಲಿ ಮೃತಪಟ್ಟವರಿಗೆ ಮಾತ್ರ ₹30 ಲಕ್ಷ ಪರಿಹಾರ ದೊರೆಯಲಿದೆ.

ಹೀಗಾಗಿ ನಾಲ್ಕು ದಿನಗಳ ಹಿಂದೆ ಕೋವಿಡ್–19 ಕರ್ತವ್ಯಕ್ಕೆ ತೆರಳುವಾಗ ಅಪಘಾತದಲ್ಲಿ ಮೃತಪಟ್ಟ ಬಾದಾಮಿ ತಾಲ್ಲೂಕು ನಂದಿಕೇಶ್ವರದ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಂಗರಗಿ ಅವರ ಕುಟುಂಬಕ್ಕೆ ಪರಿಹಾರ ಮೊತ್ತ ಸಿಗುವುದು ಕಷ್ಟ ಎಂಬ ಮಾತು ಜಿಲ್ಲೆಯ ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿದೆ.

ಸರ್ಕಾರದ ಆದೇಶದನ್ವಯ ಮೇ 2ರಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ ಕೌರ್ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರನ್ನು ₹30 ಲಕ್ಷ ಮೊತ್ತದ ವೈದ್ಯಕೀಯ ವಿಮೆಗೆ ಒಳಪಡಿಸುವ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ADVERTISEMENT

ಪರಿಹಾರಕ್ಕೆ ಅರ್ಹರ ವಿವರ..
ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರ ಜೊತೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಹೋಮ್‌ಗಾರ್ಡ್ಸ್, ಪೌರರಕ್ಷಣಾ ದಳ, ಅಗ್ನಿಶಾಮಕ ದಳದವರು, ಬಂದೀಖಾನೆ ಸಿಬ್ಬಂದಿ, ಪೌರಕಾರ್ಮಿಕರು, ಸ್ವಚ್ಛತಾ ಕಾರ್ಯಗಳಿಗೆ ಸಂಬಂಧಿಸಿದ ವಾಹನಗಳ ಚಾಲಕರು, ಲೋಡರ್‌ಗಳು ವಿಮೆಗೆ ಅರ್ಹರಾಗಿದ್ದಾರೆ.

’ಕರ್ತವ್ಯದ ವೇಳೆ ಕೋವಿಡ್–19 ಸೋಂಕು ತಗುಲಿ ಮೃತಪಟ್ಟರೆ ಮಾತ್ರ ವಿಮಾ ಮೊತ್ತ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದು ಪ್ರಭಾವತಿ ಅವರಿಗೆ ಪರಿಹಾರ ನೀಡಲು ತಾಂತ್ರಿಕವಾಗಿ ಅಡ್ಡಿಯಾಗಲಿದೆ‘ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕುಟುಂಬದ ಆಸರೆಯೇ ದೂರ..
ಮೇ 18ರಂದು ಬೆಳಿಗ್ಗೆ ಬಾದಾಮಿಯಿಂದ ನಂದಿಕೇಶ್ವರ ಗ್ರಾಮಕ್ಕೆ ಕೋವಿಡ್–19 ಕರ್ತವ್ಯಕ್ಕೆ ಪ್ರಭಾವತಿ ಹೊರಟಿದ್ದರು. ಈ ವೇಳೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಪ್ರಭಾವತಿ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ಒಂದೂವರೆ ಎಕರೆ ಹೊಲವೇ ಬದುಕಿಗೆ ಆಧಾರ. ಮಕ್ಕಳ ಓದಿನ ಸಲುವಾಗಿ ಬಾದಾಮಿಯಲ್ಲಿ ಮನೆ ಮಾಡಿದ್ದರು. ಮನೆಗೆ ಆಸರೆಯಾಗಿದ್ದ ಪ್ರಭಾವತಿ ಅವರ ಅಕಾಲಿಕ ಸಾವು ಕುಟುಂಬದ ಸದಸ್ಯರನ್ನು ಸಂಕಷ್ಟಕ್ಕೆ ದೂಡಿದೆ.

ಮಗಳಿಗೆ ಕೆಲಸ ಕೊಡಲು ಪ್ರಕ್ರಿಯೆ: ಡಿ.ಸಿ
’ಪ್ರಭಾವತಿ ಅವರ ಮರಣದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡಬೇಕಾದ ಪರಿಹಾರ ತುರ್ತಾಗಿ ಕೊಡಿಸಲು ವ್ಯವಸ್ಥೆ ಮಾಡಿದ್ದೇನೆ. ಅವರ ಮಗಳಿಗೆ ಅಂಗನವಾಡಿ ಕಾರ್ಯಕರ್ತೆ ಕೆಲಸ ಕೊಡಲು ತೀರ್ಮಾನಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಕೋವಿಡ್–19 ಪರಿಹಾರ ನೀಡುವ ವಿಚಾರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ‘ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಮಾನವೀಯ ದೃಷ್ಟಿಯಿಂದ ಪರಿಹಾರ ಕೊಡಲಿ..
ಕರ್ತವ್ಯಕ್ಕೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಈ ಸಂಬಂಧ ನಾನು ಇಲಾಖೆಯ ಸಚಿವರು, ಅಗತ್ಯವಾದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಬಾದಾಮಿ ಶಾಸಕ ಸಿದ್ದರಾಮಯ್ಯ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.