ADVERTISEMENT

ಬಾಗಲಕೋಟೆ: 71 ವರ್ಷದ ವೃದ್ಧನಿಗೆ ಕೋವಿಡ್–19 ದೃಢ, ಜಿಲ್ಲೆಯಲ್ಲಿ ಮೊದಲ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 15:34 IST
Last Updated 2 ಏಪ್ರಿಲ್ 2020, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ಅನಾರೊಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ 71 ವರ್ಷದ ವೃದ್ಧರೊಬ್ಬರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟರ್ ಡಾ.ಆರ್.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಕೋವಿಡ್–19 ಪ್ರಕರಣ ದೃಢಪಟ್ಟಿದೆ. ವೃದ್ಧ ಸೇರಿದಂತೆ ಮೂವರ ಗಂಟಲು ದ್ರವ ಮಾದರಿಯನ್ನು ಬುಧವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಪಾಸಿಟಿವ್ ದೃಢಪಟ್ಟಿದೆ.

ವೃದ್ಧ ಬಾಗಲಕೋಟೆಯಮಾರುಕಟ್ಟೆ ಪ್ರದೇಶದಲ್ಲಿ ಸಗಟು ದರದಲ್ಲಿ ಖಾದ್ಯ ತೈಲ ಮಾರಾಟದ ಅಂಗಡಿ ಇಟ್ಟುಕೊಂಡಿದ್ದಾರೆ. ಅವರು ಇತ್ತೀಚೆಗೆ ಎಲ್ಲಿಗೂ ಪ್ರಯಾಣ ಮಾಡಿಲ್ಲ. ಆದರೆ ಅವರ ಮಗ ಸಾಫ್ಟ್‌ವೇರ್ ಎಂಜಿನಿಯರ್ ಇದ್ದು, ಲಾಕ್‌ಡೌನ್ ಆದೇಶದ ನಂತರ ಊರಿಗೆ ಮರಳಿದ್ದರು. ಮಗ ಬಂದ ನಂತರವೇ ವೃದ್ಧನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಸದ್ಯ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ವೃದ್ಧನಿಗೆ ಕೋವಿಡ್–19 ದೃಢಪಡುತ್ತಿದ್ದಂತೆಯೇ ಹಳೆ ಬಸವೇಶ್ವರ ಬ್ಯಾಂಕ್ ಸಮೀಪ ಹಾಗೂ ಮಾರುಕಟ್ಟೆ ಭಾಗವನ್ನು ಸೋಂಕಿತಪ್ರದೇಶ ಎಂದು ಗುರುತಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ನೇತೃತ್ವದಲ್ಲಿ ಅಲ್ಲಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಯಿತು. ವೃದ್ಧನ ಕುಟುಂಬದ ಉಳಿದ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇಡಲು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.