ADVERTISEMENT

ಹುನಗುಂದ: ವಾಹನ ಚಾಲಕರಿಗೆ ಮಧ್ಯಾಹ್ನದ ಊಟ; ಯುವಪಡೆಯ ಮಾದರಿ ಕಾರ್ಯ

ಚಿತ್ರದುರ್ಗ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ

ವೆಂಕಟೇಶ ಜಿ.ಎಚ್.
Published 28 ಮೇ 2021, 21:24 IST
Last Updated 28 ಮೇ 2021, 21:24 IST
ಹುನಗುಂದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಚಾಲಕರಿಗೆ ಊಟದ ಪೊಟ್ಟಣ ವಿತರಿಸಿದ ಪರಿಸರ ಸ್ನೇಹಿ ಬಳಗದ ಗೆಳೆಯರು ಚಿತ್ರ: ಸುರೇಶ ಪತ್ತಾರ
ಹುನಗುಂದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಚಾಲಕರಿಗೆ ಊಟದ ಪೊಟ್ಟಣ ವಿತರಿಸಿದ ಪರಿಸರ ಸ್ನೇಹಿ ಬಳಗದ ಗೆಳೆಯರು ಚಿತ್ರ: ಸುರೇಶ ಪತ್ತಾರ   

ಬಾಗಲಕೋಟೆ: ಲಾಕ್‌ಡೌನ್ ಕಾರಣ ಹೆದ್ದಾರಿ ಪಕ್ಕದ ಡಾಬಾಗಳು ಬಂದ್ ಆಗಿದ್ದು, ವಾಹನ ಚಾಲಕರುದಿನಗಟ್ಟಲೇ ಹಸಿವು–ನೀರಡಿಕೆಯಲ್ಲಿ ಸಾಗಬೇಕಿದೆ. ಇವರ ಸಂಕಷ್ಟಕ್ಕೆ ಹುನಗುಂದದ ಪರಿಸರ ಸ್ನೇಹಿ ಬಳಗದ ಹುಡುಗರು ಸ್ಪಂದಿಸಿದ್ದಾರೆ.

ಹುನಗುಂದ ಪಟ್ಟಣದ ಹೊರವಲಯದಲ್ಲಿ ಚಿತ್ರದುರ್ಗ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 50) ಹಾದುಹೋಗುತ್ತದೆ. ಇದು ಉತ್ತರ ಭಾರತದ ರಾಜ್ಯಗಳೊಂದಿಗೆ ರಾಜ್ಯವನ್ನು ಬೆಸೆಯುವ ಪ್ರಮುಖ ಸಂಪರ್ಕ ಮಾರ್ಗ.

ಲಾಕ್‌ಡೌನ್‌ನಿಂದ ಈಗ ಹೆದ್ದಾರಿ ಜೀವಂತಿಕೆ ಕಳೆದುಕೊಂಡಿದೆ. ವಾಹನಗಳಿಗೆ ವಿರಾಮಕ್ಕೆ ನೆಲೆ ನೀಡಿ ಚಾಲಕರ ಹಸಿವು ನೀಗಿಸುತ್ತಿದ್ದ ಡಾಬಾಗಳು ಬಾಗಿಲುಮುಚ್ಚಿವೆ. ಸಂಕಷ್ಟ ಮನಗಂಡ ಬಳಗದ ಸದಸ್ಯರು ಚಾಲಕರಿಗೆ ನಿತ್ಯ ಮಧ್ಯಾಹ್ನ ಊಟದ ಪೊಟ್ಟಣ ಹಾಗೂ ನೀರಿನ ಸ್ಯಾಷೆಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

ADVERTISEMENT

ನಿತ್ಯವೂ ಮಧ್ಯಾಹ್ನ 1 ಗಂಟೆಗೆ ಹೆದ್ದಾರಿಯ ಆಸುಪಾಸು ನಿಲ್ಲುವ ಪರಿಸರ ಸ್ನೇಹಿ ಬಳಗದ ಸದಸ್ಯರು, ವಾಹನಗಳನ್ನು ನಿಲ್ಲಿಸಿ ಅವುಗಳಲ್ಲಿ ಪ್ರಯಾಣಿಸುವವರಿಗೆ ಊಟ–ನೀರು ಕೊಡುತ್ತಿದ್ದಾರೆ.

ಹುನಗುಂದದಲ್ಲಿ ಅಂಗಡಿ, ಗ್ಯಾರೇಜ್‌ಗಳಲ್ಲಿ ಕೆಲಸಕ್ಕಿದ್ದವರು, ಸಣ್ಣ ಪುಟ್ಟ ವ್ಯಾಪಾರಿಗಳು, ವಿದ್ಯಾರ್ಥಿಗಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಒಂದು ವಾರದಿಂದ ಈ ದಾಸೋಹ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ನಿತ್ಯ 200 ಜನರ ಹಸಿವು ನೀಗಿಸುತ್ತಿದ್ದಾರೆ.

‘ಆರಂಭದಲ್ಲಿ ನಾವೇ ಕೆಲವರು ಕೈಯಿಂದ ಹಣ ಹಾಕಿ ಊಟ ಸಿದ್ಧಪಡಿಸಿ ಕೊಡಲು ಆರಂಭಿಸಿದೆವು. ನಂತರ ಊರಿನ ದಾನಿಗಳು ನೆರವಿಗೆ ನಿಂತರು‘ ಎಂದು ಗೆಳೆಯರಾದ ಸಂತೋಷ ಬಡಿಗೇರ, ರವಿ ಚಿತ್ತರಗಿ, ರಾಹುಲ್ ಬಡಿಗೇರ ‘ಪ್ರಜಾವಾಣಿ‘ಗೆ ತಿಳಿಸಿದರು. ಲಾಕ್‌ಡೌನ್ ಮುಗಿಯುವವರೆಗೂ ಚಾಲಕರಿಗೆ ಊಟ ಕೊಡುವ ಯೋಜನೆ ಹೊಂದಿದ್ದೇವೆ‘ ಎಂದರು.

ಹೆದ್ದಾರಿ ಪಕ್ಕದಲ್ಲಿಯೇ ಗ್ಯಾರೇಜ್ ಹೊಂದಿರುವ ಮಹಾಂತೇಶ ಹೊಂಬಳ ಈ ಸದಸ್ಯರ ಬೆನ್ನಿಗೆ ನಿಂತು ಮಾರ್ಗದರ್ಶನ ಮಾಡುತ್ತಾರೆ.

’ಹೊಸಪೇಟೆಯಿಂದ ಇಲ್ಲಿವರೆಗೆ ಎಲ್ಲೂ ಕುಡಿಯಲು ನೀರು ಸಿಕ್ಕಿರಲಿಲ್ಲ. ಈ ಹುಡುಗರದು ಮಾದರಿ ಕೆಲಸ‘ ಎಂದು ಹಾಸನದಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆತೆಂಗಿನಕಾಯಿ ಲೋಡ್ ಒಯ್ಯುತ್ತಿದ್ದ ಲಾರಿಯ ಚಾಲಕ ತನ್ವೀರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.