ADVERTISEMENT

ಜಮಖಂಡಿ | ಬರೋಬ್ಬರಿ ಅರ್ಧ ಕಿ.ಲೋ ಚಿನ್ನ ವಶ!

ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಂದ ಕುಖ್ಯಾತ ಮನೆಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:52 IST
Last Updated 10 ಡಿಸೆಂಬರ್ 2019, 13:52 IST
ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ಅಂತಾರಾಜ್ಯ ಮನೆಕಳ್ಳ ಹಾಗೂ ಆತ ಕದ್ದಿದ್ದ ಚಿನ್ನಾಭರಣದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದಾರೆ
ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ಅಂತಾರಾಜ್ಯ ಮನೆಕಳ್ಳ ಹಾಗೂ ಆತ ಕದ್ದಿದ್ದ ಚಿನ್ನಾಭರಣದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದಾರೆ   

ಬಾಗಲಕೋಟೆ: ಹಾಡುಹಗಲೇ ಮನೆ ಹಾಗೂ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಜಮಖಂಡಿ ಗ್ರಾಮೀಣ ಠಾಣೆ‍ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ. ಆರೋಪಿಯಿಂದ ಬರೋಬ್ಬರಿ ಅರ್ಧ ಕೆ.ಜಿ ಚಿನ್ನಾಭರಣ ಸೇರಿದಂತೆ ₹23.31 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮೀರಜ್ ಸಮೀಪದ ಲಿಂಗನೂರಿನ ನಿವಾಸಿ ಲೋಕೇಶ ರಾವ್‌ಸಾಬ್ ಸುತಾರ ಬಂಧಿತ ಆರೋಪಿ. ಮುಧೋಳ ನಗರ, ಜಮಖಂಡಿ ತಾಲ್ಲೂಕಿನ ಹುನ್ನೂರು, ಮರೇಗುದ್ದಿ, ಕೊಣ್ಣೂರಿನಲ್ಲಿ ನಡೆದ ಒಟ್ಟು 10 ಮನೆಗಳ್ಳತನ ಪ್ರಕರಣದಲ್ಲಿ ಲೋಕೇಶ ಭಾಗಿಯಾಗಿದ್ದ.

ಕಾರಿನಲ್ಲಿ ಓಡಾಟ: ಲೋಕೇಶ ಕದ್ದ ಚಿನ್ನಾಭರಣ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮಹಾರಾಷ್ಟ್ರ ನೋಂದಣಿಯ ಫೋರ್ಡ್ ಅಕಾರ್ಡ್ ಕಾರಿನಲ್ಲಿ ಓಡಾಟ ನಡೆಸುತ್ತಿದ್ದ. ಜೊತೆಗೆ ₹1.5 ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬುಲೆಟ್ ಕೊಂಡಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಕೆಲವೊಮ್ಮೆ ಬುಲೆಟ್‌ ಬೈಕ್‌ನಲ್ಲಿ ಓಡಾಟ ನಡೆಸುತ್ತಿದ್ದನು. ಹಗಲು ಹೊತ್ತು ನಗರದ ಎಕ್ಸ್‌ಟೆನ್‌ಶನ್ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದ ಆರೋಪಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದನು. ರಾತ್ರಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದನು. ಕೆಲವು ಕಡೆ ಹಾಡುಹಗಲೇ ಮನೆಗಳ ಬೀಗ ಮುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಯಿಂದ 501.5 ಗ್ರಾಂ ಚಿನ್ನಾಭರಣ, 690 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲೂ ನಡೆದ ಕಳ್ಳತನ ಪ್ರಕರಣಗಳಲ್ಲಿ ಲೋಕೇಶ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಿದ ಜಮಖಂಡಿ ಗ್ರಾಮೀಣ ಠಾಣೆ ಪಿಎಸ್‌ಐ ಅನಿಲ್‌ಕುಮಾರ ರಾಠೋಡ, ಸಿಪಿಐ ಡಿ.ಕೆ.ಪಾಟೀಲ ಹಾಗೂ ಸಿಬ್ಬಂದಿಗೆ ಎಸ್ಪಿ ಲೋಕೇಶ ಜಗಲಾಸರ್ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.