ADVERTISEMENT

ಮುಚಖಂಡಿ ಕೆರೆ ಅಭಿವೃದ್ಧಿಗೆ ಕ್ರಮ: ಜಿಲ್ಲಾಧಿಕಾರಿ ಸಂಗಪ್ಪ

ಪರಂಪೋಕು ಜಮೀನಿನಲ್ಲಿ ಸಸಿ ನೆಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 3:16 IST
Last Updated 28 ಜುಲೈ 2025, 3:16 IST
<div class="paragraphs"><p>ಮುಚಖಂಡಿ ಕೆರೆಗೆ ಜಿಲ್ಲಾಧಿಕಾರಿ ಸಂಗಪ್ಪ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು</p></div>

ಮುಚಖಂಡಿ ಕೆರೆಗೆ ಜಿಲ್ಲಾಧಿಕಾರಿ ಸಂಗಪ್ಪ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು

   

ಬಾಗಲಕೋಟೆ: ಐತಿಹಾಸಿಕ ಮುಚಖಂಡಿ ಕೆರೆ ಸಂರಕ್ಷಣೆ, ಅಭಿವೃದ್ಧಿ ಹಾಗೂ ಪರಂಪೋಕು(ಬಿ-ಖರಾಬ) ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಮುಚಖಂಡಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಮುಚಖಂಡಿ ಕೆರೆ ವೀಕ್ಷಿಸಿದ ಅವರು, ಕೆರೆಯ ಸುತ್ತಮುತ್ತಲಿನ 100 ಎಕರೆ ಪರಂಪೋಕು ಜಮೀನಿನಲ್ಲಿ ಹೊಸದಾಗಿ ಸಸಿಗಳನ್ನು ನೆಡುವಂತೆ ಹಾಗೂ ಬೇಸಿಗೆ ಕಾಲದಲ್ಲಿ ಅವು ನಶಿಸಿ ಹೋಗದಂತೆ ಅಗತ್ಯ ಕ್ರಮವಹಿಸಲು ಅರಣ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಮುಚಖಂಡಿ ಕೆರೆಗೆ ಹೊಂದಿಕೊಂಡಿರುವ ಬೆಟ್ಟಗಳಲ್ಲಿನ ಅರಣ್ಯ ನಾಶದಿಂದಾಗಿ ಮಣ್ಣಿನ ಸವೆತ, ಕೆರೆಯಲ್ಲಿ ಹೂಳು ತುಂಬುವಿಕೆ ಮತ್ತು ನೀರಿನ ಮಟ್ಟ ಕುಸಿಯುವಿಕೆ ಉಂಟಾಗಿದೆ. ಈ ಪ್ರದೇಶದಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಡುವುದರಿಂದ ಮಣ್ಣಿನ ಸವೆತವನ್ನು ತಡೆಯಬಹುದಾಗಿದೆ. ಅಂತರ್ಜಲ ಮರುಪೂರ್ಣವನ್ನು ಹೆಚ್ಚಿಸಬೇಕು. ಜೈವಿಕ ವೈವಿಧ್ಯತೆಯನ್ನು ಪುನಃ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು, ಪರಿಸರ ಸಂಘಟನೆಗಳು ಮತ್ತು ಸ್ವಯಂಸೇವಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕೆರೆಯಲ್ಲಿನ ಹೂಳು, ಕಸ, ಗಿಡ-ಗಂಟಿ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ, ಕೆರೆಯನ್ನು ಸ್ವಚ್ಛಗೊಳಿಸಲು ತಿಳಿಸಿದರಲ್ಲದೇ ಕೆರೆ ತುಂಬುವ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ಅಂತರಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಯ ಎದುರು ನಿರ್ಮಿಸಲಾಗಿರುವ ಉದ್ಯಾನ ವನವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಅಲ್ಲಿನ ಕಸ, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಆವರಣವನ್ನು ಶುಚಿಯಾಗಿಡಬೇಕು. ಕೈದೋಟದಲ್ಲಿ ಸಸಿಗಳನ್ನು ಕಾಲಕಾಲಕ್ಕೆ ಕಟಾವು ಮಾಡಿ ನೀರುಣಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್, ಭೂ ದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಷಣ್ಮುಕ ಡಿ.ಎಚ್, ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿ ಇಲಾಖೆ ಸಹಾಯಕ ಅಭಿಯಂತರ ಪ್ರಕಾಶ ನಾಯಿಕ, ಹಿರಿಯ ಭೂವಿಜ್ಞಾನಿ ಮಹೇಶ ಬಿರಾಜನವರ, ತಹಶೀಲ್ದಾರ್‌ ವಾಸುದೇವ ಸ್ವಾಮಿ ಇದ್ದರು.

ಮುಚಖಂಡಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಮಣ್ಣು ಗರಸು ಅಕ್ರಮವಾಗಿ ಅಗೆಯುತ್ತಿರುವ 2 ಟಿಪ್ಪರ್‌ ಹಾಗೂ 1 ಜೆಸಿಬಿ ವಾಹನವನ್ನು ವಶಕ್ಕೆ ಪಡೆದು ನಿಯಮಾನುಸಾರ ಕ್ರಮವಹಿಸಬೇಕು
-ಸಂಗಪ್ಪ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.