ADVERTISEMENT

ಬಾಗಲಕೋಟೆ | ತಾಯಿ ಮರಣ ತಡೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸಂಗಪ್ಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 3:59 IST
Last Updated 26 ಜುಲೈ 2025, 3:59 IST
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ತಾಯಿ ಮರಣ ಮತ್ತು ಜಿಲ್ಲಾ ಮಟ್ಟದ ಸರ್ವೇಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ತಾಯಿ ಮರಣ ಮತ್ತು ಜಿಲ್ಲಾ ಮಟ್ಟದ ಸರ್ವೇಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು   

ಬಾಗಲಕೋಟೆ: ತಾಯಿ ಮರಣ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ತಾಯಿ ಮರಣ ಮತ್ತು ಜಿಲ್ಲಾಮಟ್ಟದ ಸರ್ವೇಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯವರು ಗರ್ಭಿಣಿಯರನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಎದುರಾಗಬಹುದಾದ ಗಂಡಾಂತರಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ಗರ್ಭಿಯಾಗಿರುವಾಗ ಮೇಲಿಂದ ಮೇಲೆ ಪರೀಕ್ಷೆಗೆ ಒಳಪಡಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಸಾರ್ವಜನಿಕರು ಕೂಡಾ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ 2024 ಏಪ್ರಿಲ್‌ನಿಂದ 2025 ಮಾರ್ಚ್‌ವರೆಗೆ 12 ತಾಯಿ ಮರಣ ಪ್ರಕರಣಗಳು ಕಂಡುಬಂದಿದ್ದು, 2025 ಏಪ್ರಿಲ್‌ನಿಂದ ಇಲ್ಲಿವರೆಗೆ 5 ಪ್ರಕರಣಗಳು ಕಂಡುಬಂದಿವೆ. ರಕ್ತ ಹೀನತೆ, ನಂಜಿನಿಂದ ತಾಯಿ ಮರಣಗಳು ಉಂಟಾಗುತ್ತಿವೆ. ಗರ್ಭಿಣಿ ಮಹಿಳೆಯರಲ್ಲಿ ಕಬ್ಬಿಣಾಂಶ ಪ್ರಮಾಣ ಕಡಿಮೆ ಇರುವದರಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿವೆ. ಪ್ರಾರಂಭದಲ್ಲಿಯೇ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಮಹೇಶ ಕೋಣಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸುವರ್ಣಾ ಕುಲಕರ್ಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಉಪಸ್ಥಿತರಿದ್ದರು.‌

Cut-off box - ರೇಬಿಸ್‌ ಹಾವು ಕಡಿತ: ಜಾಗೃತಿ ಮೂಡಿಸಿ ಬಾಗಲಕೋಟೆ: ರೇಬಿಸ್ ಹಾಗೂ ಹಾವು ಕಡಿತದಿಂದ ಸಾವು ಪ್ರಕರಣಗಳು ಕಂಡುಬರುತ್ತಿವೆ. ಇಂತಹ ಪ್ರಕರಣಗಳಿಗೆ ಯಾವುದೇ ರೀತಿಯ ಲಸಿಕೆಗಳ ಕೊರತೆ ಆಗದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು. ಹಾವು ಮತ್ತು ನಾಯಿ ಕಡಿತದಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಮರಣ ಪ್ರಮಾಣ ಕಡಿಮೆ ಮಾಡಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಜಿ.ಎನ್. ಮಾತನಾಡಿ ಹಾವು ಕಚ್ಚಿದಾಗ ಅದಕ್ಕೆ ಬಟ್ಟೆ ಕಟ್ಟದೇ ಆ ವ್ಯಕ್ತಿಯನ್ನು ನಡೆದಾಡಿಸದೇ ಎತ್ತಿಕೊಂಡು ಆಸ್ಪತ್ರೆಗೆ ಹೋಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.