ಹುನಗುಂದ: ಇತ್ತೀಚೆಗೆ ಮಹಾರಾಷ್ಟ್ರದ ವಿಶಾಲಗಡದಲ್ಲಿ ಗಲಭೆ ಸೃಷ್ಟಿಸಿ ಅಪಾರ ಆಸ್ತಿ ನಷ್ಟವುಂಟು ಮಾಡಿದ್ದ ಗಲಭೆಕೋರರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಗ್ರೇಡ್ 2–ತಹಶೀಲ್ದಾರ್ ಮಹೇಶ ಸಂದಿಗೌಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮುಖಂಡ ಆಸೀಫ್ ಮೌಲನಾ ಮಾತನಾಡಿ, ‘ಕೊಲ್ಲಾಪುರ ಜಿಲ್ಲೆಯ ವಿಶಾಲಗಡದ ಮಲಿಕ್ ರೆಹಾನ್ ದರ್ಗಾದ ಮೇಲೆ ಕಲ್ಲು ತೂರಾಟ ಮಾಡಿ ಪಕ್ಕದ ಗಜಾಪುರ ಎಂಬ ಗ್ರಾಮದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಿ ಮನೆಗಳಲ್ಲಿನ ಮಹಿಳೆಯರ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿ ಗ್ಯಾಸ್ ಸಿಲಿಂಡರ್‌ಗಳನ್ನ, ಸ್ಫೋಟಿಸಿ ಬೆಂಕಿ ಹಚ್ಚಿ ಮನೆಗಳನ್ನು ಹಾನಿ ಮಾಡಿದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಈ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು‘ ಎಂದು ಆಗ್ರಹಿಸಿದರು.
ಮುಖಂಡ ರಮ್ಜಾನ್ ಕಡಿವಾಲ ಮಾತನಾಡಿ, ಕಲ್ಲು ತೂರಾಟದಲ್ಲಿ ಸಾಕಷ್ಟು ಮಹಿಳೆಯರು, ಯುವಕರು, ಮಕ್ಕಳು , ಗಾಯಗೊಂಡಿರುವ ವರದಿಯಾಗಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಮುತುರ್ವಜಿ ವಹಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಮತ್ತು ನೊಂದ ಜನರಿಗೆ ರಕ್ಷಣೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದರು.
ರಿಯಾಜ್ ಬಂಗಾರ ಗುಂಡ, ಪರ್ವೇಜ್ ಖಾಜಿ, ಇಸ್ಮಾಯಿಲ್ ನಾಯಿಕ್, ಮಹೆಬೂಬ್ ನಾಯಿಕ್, ಆಸೀಫ್ ಕಲ್ಬುರ್ಗಿ, ಮುರ್ತುಜಾ ಧನ್ನೂರು ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.