ADVERTISEMENT

ಬಾಗಲಕೋಟೆ | ಮತದಾನದಿಂದ ಪ್ರಜಾಪ್ರಭುತ್ವ ಬಲಿಷ್ಠ: ವಿಜಯ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:09 IST
Last Updated 26 ಜನವರಿ 2026, 5:09 IST
ಬಾಗಲಕೋಟೆ ತೋವಿವಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಬಾಗಲಕೋಟೆ ತೋವಿವಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ಬಾಗಲಕೋಟೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಧಾರ ಸ್ತಂಭವಾಗಿರುವ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಮಾಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಹೇಳಿದರು.

ತೋವಿವಿ ಸಭಾಭವನದಲ್ಲಿ ಶನಿವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇತ್ತೀಚೆಗೆ ಯುವ ಮತದಾರರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ನಮ್ಮನ್ನು ಆಳುವ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಕರ್ತವ್ಯ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ‘ಮತದಾನದ ಪವಿತ್ರತೆಯನ್ನು ಅರಿಯಲು ಮತದಾನ ದಿನಾಚರಣೆ ಆಚರಿಸಲಾಗುತ್ತಿದೆ. ಮೂಲ ಹಕ್ಕುಗಳಲ್ಲಿ ಮತದಾನ ಮಾಡುವುದು ಕೂಡಾ ಹಕ್ಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮತದಾನವಾಗುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಮತದಾನ ಕುಂಠಿತಗೊಳ್ಳುತ್ತಿದೆ. ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಮತದಾನದ ಹಕ್ಕು ಪಡೆದಿದ್ದು, ಪ್ರತಿಯೊಂದು ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವಂತಾಗಬೇಕು. ಮತದಾನ ಮಾಡದಿದ್ದರೆ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುವದಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಮತದಾನದ ದಿನಾಚರಣೆ ಅಂಗವಾಗಿ ಪ್ರೌಢ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಹಾಗೂ ಚುನಾವಣೆಗೆ ಸಂಬಂಧಿಸಿದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಉತ್ತಮ ತರಬೇತಿದಾರರಿಗೆ ಪ್ರಮಾಣ ಪತ್ರ ನೀಡಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ತೋಟಗಾರಿಕೆ ವಿವಿಯ ಕುಲಪತಿ ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವಸ್ವಾಮಿ ಉಪಸ್ಥಿತರಿದ್ದರು.

ಸೈಕಲ್ ಅಭಿಯಾನ: ಫಿಟ್ ಇಂಡಿಯಾ ಸೈಕ್ಲಿಂಗ್ ಅಡಿಯಲ್ಲಿ ಹಮ್ಮಿಕೊಂಡ ಸೈಕಲ್ ಅಭಿಯಾನಕ್ಕೆ ಶಶಿಧರ ಕುರೇರ ಚಾಲನೆ ನೀಡಿದರು. ನಗರದ ವಿವಿಧೆಡೆ ಸಂಚರಿಸಿ ಜಿಲ್ಲಾ ಕ್ರೀಡಾಂಗಣ‌‌ದಲ್ಲಿ ಮುಕ್ತಾಯಗೊಂಡಿತು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಸೈಕ್ಲಿಂಗ್ ತರಬೇತಿಗಾರ್ತಿ ಅನಿತಾ ನಿಂಬರಗಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.