ಪ್ರವೀಣ ತೊಗಾಡಿಯಾ
ಬಾಗಲಕೋಟೆ: ‘ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ಆದರೆ, ಬಡವರು ಬಡವರಾಗಿಯೇ ಇದ್ದಾರೆ. ಶಿಕ್ಷಣ ದುಬಾರಿಯಾಗಿದೆ. ಉದ್ಯೋಗ ಸಿಗುತ್ತಿಲ್ಲ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದು ಕಳವಳಕಾರಿ ಸಂಗತಿಯಾಗಿದೆ’ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರವೀಣ ತೊಗಾಡಿಯಾ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1975ರಲ್ಲಿ ನಾನು ಎಂಬಿಬಿಎಸ್ ಸೇರಿದಾಗ ₹25 ಶುಲ್ಕವಿತ್ತು. ಈಗ ₹50 ಲಕ್ಷ ಆದರೂ ಸಾಲುತ್ತಿಲ್ಲ. ಈಗ ಎಲ್‌ಕೆಜಿಗೂ ಸೇರಿಸಿಕೊಳ್ಳಲ್ಲ. ಬಡವರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.’ ಎಂದರು
ಹಿಂದೂಗಳ ರಕ್ಷಣೆ, ಸಮೃದ್ಧಿಗಾಗಿ ದೇಶದ ಪ್ರತಿ ಹಳ್ಳಿ, ನಗರದಲ್ಲಿ ಹನುಮಾನ ಚಾಲಿಸ್ ಕೇಂದ್ರ ಸ್ಥಾಪಿಸಿ, ಸಾಮೂಹಿಕವಾಗಿ ಹನುಮಾನ ಚಾಲಿಸ್ ಪಠಿಸಬೇಕು. ಈ ಕೇಂದ್ರಗಳಿಂದ ಬಡ ಹಿಂದೂಗಳಿಗೆ ಆಹಾರ, ಶಿಕ್ಷಣ, ಕಾನೂನು, ಆರೋಗ್ಯ ಹಾಗೂ ಉದ್ಯೋಗ ದೊರೆಯುವಂತಾಗಬೇಕು’ ಎಂದು ಹೇಳಿದರು.
‘ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಶೇ86ರಷ್ಟು ಹಿಂದೂಗಳಿದ್ದರು. ಈಗ ಶೇ78ಕ್ಕೆ ಕಡಿಮೆಯಾಗಿದೆ. ಆಗಶೇ 6ರಷ್ಟಿದ್ದ ಮುಸ್ಲಿಮರ ಸಂಖ್ಯೆ ಈಗ ಶೇ15ಕ್ಕೆ ಹೆಚ್ಚಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಪ್ರತಿ ಹಿಂದೂ ಕುಟುಂಬ ಮೂರು ಮಕ್ಕಳನ್ನು ಹೊಂದಬೇಕು. 3ನೇ ಮಗುವಿನ ಶಿಕ್ಷಣಕ್ಕೆ ಪರಿಷತ್ ನೆರವು ನೀಡಲಿದೆ. ಕೇಂದ್ರವು ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಬೇಕು. ಬಾಂಗ್ಲಾದಿಂದ ಬರುವ ಅಕ್ರಮ ನುಸುಳುಕೋರರನ್ನು ತಡೆಯಬೇಕು’ ಎಂದರು.
‘ವಸ್ತುಗಳನ್ನು ಹಿಂದೂಗಳಿಂದಲೇ ಖರೀದಿಸಬೇಕು. ಹಿಂದೂಗಳಿಗೆ ಕೆಲಸ ಕೊಡಬೇಕು. ಹಿಂದೂ ರಕ್ಷಣೆ ಅವಶ್ಯಕತೆ ಹೆಚ್ಚಿದೆ’ ಎಂದು ಹೇಳಿದರು.
‘ಆಪರೇಷನ್ ಸಿಂಧೂರ ಸಮಾಧಾನ ತಂದಿದೆ. ಪಾಕಿಸ್ತಾನದ ವಿರುದ್ಧ ಸೇನೆ ಉತ್ತಮ ದಾಳಿ ನಡೆಸಿತು. ಇನ್ನು ನಾಲ್ಕು ದಿನ ದಾಳಿ ನಡೆಸಿದ್ದರೆ ಪಾಕಿಸ್ತಾನ ವೆಂಟಿಲೇಟರ್‌ಗೆ ಹೋಗುತ್ತಿತ್ತು’ ಎಂದರು.
‘ಪಕ್ಷ ಯಾವುದು ಎಂದು ನೋಡುವುದಿಲ್ಲ. ಹಿಂದುತ್ವ ನೋಡುತ್ತೇನೆ. ಹಿಂದುತ್ವದವರ ಜೊತೆಗೆ ನಿಲ್ಲುತ್ತೇನೆ. ಹೊಸ ಹಿಂದೂ ಸಂಘಟನೆಗಳನ್ನು ಸದಾ ಸ್ವಾಗತಿಸುತ್ತೇನೆ. ದ್ವೇಷ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಆದರೆ ತಪ್ಪೇನಿಲ್ಲ’ ಎಂದು ಹೇಳಿದರು.
ರಮೇಶ ಕುಲಕರ್ಣಿ, ಘನಶ್ಯಾಮ ಭಾಂಡಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.