ಕಮತಗಿ (ಅಮೀನಗಡ): ‘ಕಾಯಕದಲ್ಲಿ ಶ್ರದ್ದೆ ಹಾಗೂ ಪ್ರಯತ್ನವಿದ್ದರೆ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು ಎಂಬುದನ್ನು ತೋರಿಸಿ ನೇಕಾರಿಕೆಯನ್ನು ಇಂದಿಗೂ ಮುಂದುವರಿಸಿಕೊಂಡು, ಅದರಲ್ಲಿ ಬದುಕು ಸಾಗಿಸುತ್ತಿರುವ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣದ ಕೈಮಗ್ಗ ನೇಕಾರ ಲಕ್ಷ್ಮಣ ಕಕ್ಕಣ್ಣವರ ಅವರಿಗೆ 2025ರ ಕೈಮಗ್ಗ ನೇಕಾರಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ.
ಪ್ರತಿ ವರ್ಷ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನಡೆಯುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೈಮಗ್ಗ ನೇಕಾರಿಕೆಯಲ್ಲಿ ವಿನೂತನ ಶೈಲಿಯ ಕೌಶಲದಲ್ಲಿ ತಯಾರಾದ ಕೈಮಗ್ಗ ಸೀರೆಯನ್ನು ಆಯ್ಕೆ ಮಾಡಿ ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತದೆ.
ಈ ಬಾರಿಯ ಹತ್ತಿ ಉತ್ಪನ್ನದಲ್ಲಿ ಕೈಮಗ್ಗ ನೈಕಾರಿಕೆಯಲ್ಲಿ ರಾಜ್ಯಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಯು ಪಟ್ಟಣದ ಲಕ್ಷ್ಮಣ ಕಕ್ಕಣ್ಣವರ ಅವರಿಗೆ ಮೊಮೆಂಟೊ ಸೀರೆ (ಇಳಕಲ್ ಮಾದರಿಯ ಕಾಟನ್ ಸೀರೆ) ಇದರಲ್ಲಿ ಅರಳಿದ ಕೂಡಲಸಂಗಮದ ಐಕ್ಯ ಮಂಟಪ ಶೈಲಿಗೆ ರಾಜ್ಯಮಟ್ಟದ ದ್ವಿತೀಯ ಸ್ಥಾನ ಲಭಿಸಿದೆ.
ಲಕ್ಷ್ಮಣ ದೈಹಿಕವಾಗಿ ಎಡಗಾಲಿನ ನ್ಯೂನ್ಯತೆ ಹೊಂದಿದ್ದರೂ ನೇಕಾರಿಕೆ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೈಮಗ್ಗ ನೇಕಾರಿಕೆಯನ್ನೇ ನಂಬಿಕೊಂಡು ಪತ್ನಿಯ ಜೊತೆ ಮೂರು ಜನ ಮಕ್ಕಳೊಂದಿಗೆ ಬಡತನದಲ್ಲಿಯೇ ಜೀವನ ಸಾಗಿಸುತ್ತಿರುವ ಇವರಿಗೆ ಸರ್ಕಾರ ನೆರವಾಗಬೇಕಿದೆ.
ಆಗಸ್ಟ್ 7ರಂದು ಪ್ರಶಸ್ತಿ ಪ್ರದಾನ:
ಬೆಂಗಳೂರಿನ ಕಬ್ಬನ್ ಪಾರ್ಕ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕೈಮಗ್ಗ ನೇಕಾರಿಕೆಯಲ್ಲಿ ಜಿಲ್ಲೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಇಲಾಖೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯ. ಲಕ್ಷ್ಮಣ ಅವರ ಪರಿಶ್ರಮ ಮಾದರಿ. ನೇಕಾರಿಕೆ ಉಳಿಯಬೇಕೆನ್ನುವ ಅವರ ಹಂಬಲ ಸಾರ್ಥಕವಾಗಿದೆಬಿ.ಎ.ಪಿರಜಾದೆ ಉಪ ನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟೆ
ಅಂಗವೈಕಲ್ಯ ನನ್ನ ವೃತ್ತಿ ಬದುಕಿಗೆ ಅಡ್ಡಿಯಾಗಿಲ್ಲ. ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಕೈಮಗ್ಗ ನೇಕಾರಿಕೆ ಉಳಿಯಬೇಕು ಎನ್ನುವ ಹಂಬಲದೊಂದಿಗೆ ಸತತ 15 ದಿನಗಳ ಕಾಲ ವಿನೂತನ ಪರಿಕಲ್ಪನೆಯೊಂದಿಗೆ ಸೀರೆಯಲ್ಲಿ ಕೂಡಲಸಂಗಮ ಐಕ್ಯ ಮಂಟಪದ ಮಾದರಿ ರಚಿಸಿರುವೆ. ನನ್ನ ವೃತ್ತಿ ಬದುಕಿಗೆ ಪ್ರಶಸ್ತಿ ಖುಷಿ ತಂದಿದೆ.ಲಕ್ಷ್ಮಣ ಕಕ್ಕಣ್ಣವರ ಪ್ರಶಸ್ತಿ ಪುರಸ್ಕೃತ
ನಮ್ಮ ಸಂಘದ ಸದಸ್ಯರೊಬ್ಬರು ಸತತ ಪ್ರಯತ್ನ ಮಾಡಿ ವಿನೂತನ ಶೈಲಿಯ ಕೈಮಗ್ಗ ಸೀರೆ ನೇಯುವ ಮೂಲಕ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದು ಸಂಘಕ್ಕೆ ಹೆಮ್ಮೆಯ ವಿಷಯ. ನೇಕಾರಿಕೆ ಮುಂದುವರಿಯಲು ಇದು ಪ್ರೇರಣೆಯಾಗಲಿಪಾಂಡುರಂಗ ಕೋಟಿ ಕಾರ್ಯದರ್ಶಿ ಚಾಮುಂಡೇಶ್ವರಿ ರೇಷ್ಮೆ ಕೈಮಗ್ಗ ನೇಕಾರ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.