ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳಿದ್ದರೂ ನಿತ್ಯ ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 15 ಮೇ 2025, 4:35 IST
Last Updated 15 ಮೇ 2025, 4:35 IST
ಬಾಗಲಕೋಟೆ ಜಿಲ್ಲೆಯ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿರುವುದು
ಬಾಗಲಕೋಟೆ ಜಿಲ್ಲೆಯ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿರುವುದು   

ಬಾಗಲಕೋಟೆ: ಜಿಲ್ಲೆಯಲ್ಲಿ ಮೂರು ನದಿಗಳು ಹರಿದಿದ್ದರೂ ಕುಡಿಯುವ ನೀರಿಗಾಗಿ ಜಿಲ್ಲೆಯ ಜನತೆ ಪರದಾಡುವುದು ತಪ್ಪಿಲ್ಲ. ಕೆಲವು ಕಡೆ ವಾರಕ್ಕೊಮ್ಮೆ ನೀರು ಬಂದರೆ, ಇನ್ನು ಕೆಲವು ಕಡೆಗಳಲ್ಲಿ ವಾರಕ್ಕೆ ಎರಡು ಬಾರಿ, ವಾರಕ್ಕೆ ಮೂರು ಬಾರಿ, ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತದೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ನದಿಗಳು ಹರಿಯುತ್ತಿದ್ದರೂ, ಆಲಮಟ್ಟಿ ಜಲಾಶಯದ ಹಿನ್ನೀರಿದ್ದರೂ, ಅಲ್ಲಲ್ಲಿ ಬ್ಯಾರೇಜ್‌ಗಳ ನಿರ್ಮಾಣ ಮಾಡಲಾಗಿದ್ದರೂ ನೀರಿಗೆ ಪರದಾಡುವುದು ತಪ್ಪಿಲ್ಲ. ಬೇಸಿಗೆಯಲ್ಲಷ್ಟೇ ಅಲ್ಲ, ಕೆಲವು ಕಡೆಗಳಲ್ಲಿ ವರ್ಷಪೂರ್ತಿ ನೀರಿಗೆ ಪರದಾಡುವ ಸ್ಥಿತಿ ಇದೆ. ಒಂದು ಬಾರಿ ನೀರು ಬಂದರೆ ವಾರಗಟ್ಟಲೇ ಸಂಗ್ರಹಿಸಿಟ್ಟುಕೊಳ್ಳಬೇಕು.

ಜಿಲ್ಲೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಮುಧೋಳ ವಿಧಾನಸಭಾ ಕ್ಷೇತ್ರದವರು ಸಚಿವರಾಗಿದ್ದಾರೆ. 25 ವರ್ಷಗಳಿಂದ ಸಚಿವರನ್ನು ಕಂಡು ಕ್ಷೇತ್ರ ಮುಧೋಳ. ಆದರೆ, ಮುಧೋಳದಲ್ಲಿಯೇ ವಾರಕ್ಕೊಮ್ಮೆ ನೀರು ಸರಬರಾಜು ಆಗುತ್ತದೆ. ಎರಡು ದಶಕಗಳಿಂದ ಇದೇ ಸ್ಥಿತಿ ಇದೆ. ನಿತ್ಯ ನೀರು ಪಡೆಯುವ ಭಾಗ್ಯ ಜನರಿಗೆ ದೊರೆತಿಲ್ಲ.

ADVERTISEMENT

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಜಿಲ್ಲೆಯಲ್ಲಿ 267 ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 9 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬಾದಾಮಿ ತಾಲ್ಲೂಕಿನ ನೀರಲಗಿ, ಗಂಗನಬೂದಿಹಾಳ, ಗಿಡ್ಡನಾಯಕನಹಳ್ಳಿ, ಕೈನಕಟ್ಟಿ, ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ, ಇಳಕಲ್ ತಾಲ್ಲೂಕಿನ ನಂದವಾಡಗಿ, ಚಿಕ್ಕಕೊಡಗಲಿ, ಬಾಗಲಕೋಟೆ ತಾಲ್ಲೂಕಿನ ಮೂಡಪಲಜೀವಿ ಗ್ರಾಮದಲ್ಲಿ ಜಲಮೂಲ ಬತ್ತಿ ಹೋಗಿದೆ. ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಎಂಜಿನಿಯರ್ ಆಕಾಶ್ ತಿಳಿಸಿದರು.

ಬನಹಟ್ಟಿಯಲ್ಲಿ ಮೂರು ವರ್ಷಗಳ ಹಿಂದೆಯೇ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಕಾಮಗಾರಿ ಮಾಡಲಾಗಿದೆ. ಇಂದಿಗೂ ನೀರು ಬಂದಿಲ್ಲ. ರಬಕವಿ, ರಾಂಪುರದಲ್ಲಿ ಈಗ ಕಾಮಗಾರಿ ಆರಂಭಿಸಲಾಗಿದೆ. ಬನಹಟ್ಟಿಯಲ್ಲಿ ಅಳವಡಿಸಲಾಗಿದ್ದ ಮೀಟರ್‌ಗಳು ಕಿತ್ತು ಹೋಗಿವೆ. ಇದೇ ಸ್ಥಿತಿ ಬಾಗಲಕೋಟೆ ನಗರದಲ್ಲೂ ಇದೆ.

ನೀರು ಹರಿಸಿದ್ದೇ ಬಂತು, ಹೋದದ್ದೆಲ್ಲಿಗೇ?: ಕುಡಿಯುವ ನೀರಿನ ಸಮಸ್ಯೆ ಎದುರಾಗಲೆಲ್ಲ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾಕ್ಕೆ ಕುಡಿಯುವ ನೀರನ್ನು ಜಲಾಶಯಗಳಿಂದ ಬಿಡಲಾಗುತ್ತದೆ.

ಘಟಪ್ರಭಾ ನದಿಗೆ ಮೇ 8 ರಂದು ಸೇರಿದಂತೆ ಎರಡು ಬಾರಿ ನೀರು ಹರಿಸಲಾಗಿದೆ. ಮೊದಲ ಬಾರಿಗೆ ನೀರು ಹರಿಸಿದಾಗ ಬಾಗಲಕೋಟೆಗೆ ಕುಡಿಯುವ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ್‌ ತುಂಬಿಸಲಾಗಿಲ್ಲ. ಈಗ ಎರಡನೇ ಬಾರಿಗೆ ನೀರು ಬಿಡಲಾಗಿದ್ದೂ, ಈಗಲಾದರೂ ಬರುತ್ತದೆಯಾ ಎಂಬುದು ಪ್ರಶ್ನೆಯಾಗಿದೆ.

ಕುಡಿಯುವ ನೀರಿಗಾಗಿ ಬಿಟ್ಟ ನೀರನ್ನು ಅನ್ಯಕಾರ್ಯಕ್ಕೆ ಬಳಸಿಕೊಳ್ಳುವುದರಿಂದ ಕೆಳಭಾಗದ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಅನ್ಯಬಳಕೆ ತಡೆಯುವಲ್ಲಿ ಅಧಿಕಾರಿಗಳೂ ವಿಫಲರಾಗಿದ್ದಾರೆ. ನೀರಿನ ಸಂಗ್ರಹ ಇದ್ದರಿಂದ ಈ ಬಾರಿ ನೀರಿನ ಸಮಸ್ಯೆ ಜಿಲ್ಲೆಯ ಜನರನ್ನು ಕಳೆದ ಬಾರಿಯಷ್ಟು ಬಾಧಿಸಿಲ್ಲ. 

ಬಾಗಲಕೋಟೆ ನಗರದ ರೂಪಲ್ಯಾಂಡ್ ತೆಗ್ಗಿ ಲೇಔಟ್‌ ಸೇರಿದಂತೆ ಹಲವಾರು ಬಡಾವಣೆಗಳಿಗೆ ತಿಂಗಳುಗಟ್ಟಲೇ ನೀರು ಬಂದಿರಲಿಲ್ಲ. ಈಗ ವಾರಕ್ಕೆ ಎರಡು ಬಾರಿ ಬರುತ್ತಿದೆ
ಶಿವಕುಮಾರ ಆರ್‌ ವಿದ್ಯಾಗಿರಿ ನಿವಾಸಿ
ಪತ್ರ ಬರೆದರೂ ಬಿಡುಗಡೆಯಾಗಿಲ್ಲ ನೀರು
ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೂಡಲೇ 2 ಟಿಎಂಸಿ ಅಡಿ ನೀರು ಬಿಡುಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದರೂ ತಿಂಗಳು ಕಳೆದರೂ ನೀರು ಬಿಡಗುಡೆಯಾಗಿಲ್ಲ. ಈ ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡುತ್ತಿತ್ತು. ಈ ಬಾರಿ ಬಿಡುಗಡೆ ಮಾಡಿಲ್ಲವಾದ್ದರಿಂದ ಕೆಲವು ಕಡೆಗಳಲ್ಲಿ ನೀರಿಗೆ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.