ADVERTISEMENT

ಬಾಗಲಕೋಟೆ | ಏಕಕಾಲಕ್ಕೆ 100 ಸಂಜೀವಿನಿ ಕ್ಯಾಂಟೀನ್‍ಗೆ ಚಾಲನೆ

ಜಮಖಂಡಿ, ಮುಧೋಳದಲ್ಲಿ ಅಕ್ಕ ಕೆಫೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:32 IST
Last Updated 26 ಜನವರಿ 2025, 15:32 IST
ಬಾಗಲಕೋಟೆಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಹೋದರಿ ಸಂಜೀವಿನಿ ಕ್ಯಾಂಟೀನ್‌ಗೆ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಹೋದರಿ ಸಂಜೀವಿನಿ ಕ್ಯಾಂಟೀನ್‌ಗೆ ಚಾಲನೆ ನೀಡಿದರು   

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಏಕ ಕಾಲದಲ್ಲಿ 100 ಸಹೋದರಿ ಸಂಜೀವಿನಿ ಕ್ಯಾಂಟೀನ್‍ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಭಾನುವಾರ ಚಾಲನೆ ನೀಡಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಹೋದರಿ ಸಂಜೀವಿನಿ ಕ್ಯಾಂಟೀನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಏಕ ಕಾಲದಲ್ಲಿ 100 ಸಂಜೀವಿನಿ ಕ್ಯಾಂಟಿನ್ ಪ್ರಾರಂಭಿಸಿರುವುದು ರಾಜ್ಯದಲ್ಲಿಯೇ ಪ್ರಥಮ ಎಂದರು. ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಕ್ಯಾಂಟೀನ್ ಸಹಕಾರಿಯಾಗಲಿದ್ದು, ಇತರೆ ಮಹಿಳಾ ಸಂಘದವರು ಸ್ವ-ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು ಎಂದರು.

ಎನ್.ಆರ್.ಎಲ್.ಎಂ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳೇ ನಿರ್ವಹಿಸುತ್ತಿರುವ ಉತ್ತಮ ಗುಣಮಟ್ಟದ ಆಹಾರ ಹಾಗೂ ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮುಧೋಳ ಹಾಗೂ ಜಮಖಂಡಿ ತಾಲ್ಲೂಕಿನಲ್ಲಿ ₹22.40 ಲಕ್ಷ ವೆಚ್ಚದಲ್ಲಿ ಎರಡು ಅಕ್ಕ ಕೆಫೆ ತೆರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಎನ್.ಆರ್.ಎಲ್.ಎಂ ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಮೂಲಕ ಕ್ಯಾಂಟೀನ್ ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಬಾದಾಮಿ ತಾಲ್ಲೂಕಿನಲ್ಲಿ 12, ಬಾಗಲಕೋಟೆ 15, ಬೀಳಗಿ 12, ಗುಳೇದಗಡ್ಡ 8, ಹುನಗುಂದ 12, ಇಳಕಲ್ 10, ಜಮಖಂಡಿ 14, ಮುಧೋಳ 14 ಹಾಗೂ ರಬಕವಿ-ಬನಹಟ್ಟಿಯಲ್ಲಿ 7 ಕ್ಯಾಂಟೀನ್‌ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಆಹಾರೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪ್ರತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ₹40 ಸಾವಿರನಂತೆ 450 ಫಲಾನುಭವಿಗಳಿಗೆ ₹1.80 ಕೋಟಿ ಸಾಲ ನೀಡಲಾಗಿದೆ. ಅಲ್ಲದೇ ಜಿಲ್ಲೆಯ 800 ಗ್ರಾಮೀಣ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ ತರಬೇತಿ ನೀಡಿ ಸ್ವ-ಉದ್ಯೋಗ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.