ADVERTISEMENT

ಲಿಂಗರಾಜ ಕಣ್ಣಿಗೆ ಸಚಿವ ಖರ್ಗೆ ರಕ್ಷಣೆ: ಶಾಂತಗೌಡ ಪಾಟೀಲ

ನರೇಗಾದಲ್ಲೂ ರಾಜ್ಯದ ವಿವಿಧೆಡೆ ಅಕ್ರಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:21 IST
Last Updated 17 ಜುಲೈ 2025, 5:21 IST
<div class="paragraphs"><p>ಶಾಂತಗೌಡ ಪಾಟೀಲ</p></div>

ಶಾಂತಗೌಡ ಪಾಟೀಲ

   

ಬಾಗಲಕೋಟೆ: ‘ಮಾದಕ ವಸ್ತು ಸಾಗಣೆಯಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್‌ ಮುಖಂಡ ಲಿಂಗರಾಜ ಕಣ್ಣಿ ಇಲ್ಲಿಯವರೆಗೆ ರಾಜ್ಯ ಸರ್ಕಾರದ ರಕ್ಷಣೆಯಿಂದ ಸಿಕ್ಕಿಬಿದ್ದಿರಲಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆಗಿರುವವರೇ ಸಿಕ್ಕಿಬಿದ್ದಿದ್ದಾರೆ. ಅವರ ಸಹಾಯ ಇಲ್ಲದೇ ಮಾದಕ ವಸ್ತು ಸಾಗಣೆ ಮಾಡಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ, ‍ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವವರಿಗೆ ತಮ್ಮ ಜೊತೆಗಿರುವವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿರುವುದಿಲ್ಲವೇ? ಗೊತ್ತಿದ್ದೂ ಮುಚ್ಚಿಟ್ಟಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಿದೆ. ಬಾದಾಮಿಯಲ್ಲೂ ಇದೆ. ಯುವ ಜನತೆಯ ಜತೆಗೆ ಆ ಕುಟುಂಬದ ಸದಸ್ಯರೂ ಸಂಕಷ್ಟ ಎದುರಿಸುತ್ತಿದ್ದಾರೆ. ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಖರ್ಗೆ ಇಲಾಖೆಯ ನರೇಗಾದಡಿ ಹಲವು ಕಡೆ ಅಕ್ರಮ ನಡೆಯುತ್ತಿವೆ. ಜಿಲ್ಲೆಯ ಗಂಜಿಹಾಳದಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಮಾತನಾಡುವುದಿಲ್ಲ ನರೇಗಾದ ಹೊರಗುತ್ತಿಗೆ ಸಿಬ್ಬಂದಿ ಏಳು ತಿಂಗಳಿಂದ ವೇತನ ಇಲ್ಲ ಎಂದರೆ ಕುಟುಂಬ ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದರು

‘ಶಾಸಕ ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್ಸಿನ 55 ಶಾಸಕರೊಂದಿಗೆ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಯಾವ ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಪಟ್ಟಿ ಕೊಡಿ. ಮಾತುಕತೆ ನಡೆಸಲು ಯಾರು ಬಂದಿದ್ದರು ತಿಳಿಸಿ’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ವಿಜಯಾನಂದ ಅವರ ಹೇಳಿಕೆಗೆ ಅವರ ಪಕ್ಷದ ಸಚಿವ ರಾಜಣ್ಣ, ತಲೆ ಸರಿ ಇಲ್ಲದವರು ಹೇಳಿದ್ದಾರೆ ಎಂದಿದ್ದಾರೆ. ಈ ಹಿಂದೆ ಶಾಸಕ ರವಿಕುಮಾರ ಗಣಿಗ ಅವರೂ ಬಿಜೆಪಿಯವರು ಇಂತಹ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದಿದ್ದರು. ಅದಕ್ಕೆ ಆ ಶಾಸಕರೇ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದಿದ್ದರು. ಇದರಿಂದ ಸುಳ್ಳು ಹೇಳುತ್ತಿರುವುದು ಸಾಬೀತಾಗಿದೆ’ ಎಂದರು.

ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ‘ಟೊಯೊಟಾ ಕಾರು ಉತ್ಪಾದನಾ ಘಟಕ, ಇನ್ಪೊಸಿಸ್ ಹೊಸ ಶಾಖೆ ಆಂಧ್ರಪ್ರದೇಶಕ್ಕೆ ಹೋಗಿವೆ. ಉದ್ಯಮಿಗಳನ್ನು ಕರೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ದೂರಿದರು.

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುತ್ತ ತುದಿಯಲ್ಲಿದೆ. ಸಚಿವ ಖರ್ಗೆ ಅವರಿಗೆ ಸೇರಿದ ಕಲಬುರಗಿ ವಿಭಾಗ ಸಂಪೂರ್ಣವಾಗಿ ಹಿಂದುಳಿದಿದೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿಯಾಗಿಲ್ಲ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಲ್ಲಯ್ಯ ಮೂಗನೂರಮಠ, ಮುತ್ತು ಉಳ್ಳಾಗಡ್ಡಿ, ಶಿವಾನಂದ ಸುರಪುರ ಇದ್ದರು.

Highlights - ಕಾಂಗ್ರೆಸ್‌ ಶಾಸಕರ ಸುಳ್ಳು ಆರೋಪ ರಾಜ್ಯದಲ್ಲಿ ಹೆಚ್ಚಿದ ಭ್ರಷ್ಟಾಚಾರ ಖರ್ಗೆ ರಾಜೀನಾಮೆ ನೀಡಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.