ADVERTISEMENT

ಬಾಗಲಕೋಟೆ | ಸಮಸ್ಯೆಗಳಿಗೆ ಧ್ವನಿಯಾಗುವ ನಾಟಕಗಳು ಬರಲಿ: ಡಿ.ಎಸ್‌. ಚೌಗಲೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:37 IST
Last Updated 27 ಅಕ್ಟೋಬರ್ 2025, 2:37 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೂಲಿ ಶೇಖರ ಅವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿಯನ್ನು ನಾಟಕಕಾರ ಡಿ.ಎಸ್‌. ಚೌಗಲೆ ಬಿಡುಗಡೆ ಮಾಡಿದರು
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೂಲಿ ಶೇಖರ ಅವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿಯನ್ನು ನಾಟಕಕಾರ ಡಿ.ಎಸ್‌. ಚೌಗಲೆ ಬಿಡುಗಡೆ ಮಾಡಿದರು   

ಬಾಗಲಕೋಟೆ: ‘ಪ್ರಚಲಿತ ಸಮಸ್ಯೆಗಳಿಗೆ ಧ್ವನಿಯಾಗುವಂತಹ ನಾಟಕಗಳನ್ನು ರಚನೆ ಮಾಡಬೇಕು. ರಾಜಕೀಯ, ವಾಸ್ತವ ಸ್ಥಿತಿ ಆಧಾರಿತ ನಾಟಕಗಳ ಕೊರತೆ ಇದೆ’ ಎಂದು ನಾಟಕಕಾರ ಡಿ.ಎಸ್‌. ಚೌಗಲೆ ಹೇಳಿದರು.

ಬೆಂಗಳೂರಿನ ಆಕೃತಿ ಕನ್ನಡ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಭಾನುವಾರ ಪರಿಷತ್‌ ಸಭಾಂಗಣದಲ್ಲಿ ನಡೆದ ಹೂಲಿ ಶೇಖರ್ ಅವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮಠಾಠಿ ರಂಗಭೂಮಿಯಲ್ಲಿ ರಾಜಕೀಯ ವಿಡಂಬನೆ ನಾಟಕಗಳಿವೆ. ಕನ್ನಡದಲ್ಲಿಯೂ ಅಂತಹ ನಾಟಕಗಳು ಬರಬೇಕು’ ಎಂದರು.

‘ಸಮಕಾಲೀನ ಹಲವಾರು ಸುಳ್ಳುಗಳನ್ನು ಬಿಡಿಸಿ ಹೇಳುವ ಕೆಲಸವನ್ನು ದೊಡ್ಡಾಟ, ಸಣ್ಣಾಟಗಳು ಮಾಡಿವೆ. ನಾಟಕಗಳಲ್ಲಿಯೂ ಆ ಕಾರ್ಯ ಆಗಬೇಕಿದೆ. ವಿವಿಧ ದೇಶಗಳಲ್ಲಿ ತುಳಿತಕ್ಕೆ ಒಳಗಾಗುವವರ ಬಗ್ಗೆ ಒಂದು ಸಾಲು ಬರೆಯದಿರುವುದು ಹತಾಶ ಮನೋಭಾವ ಮೂಡಿಸುತ್ತದೆ. ಪ್ರಶ್ನೆ ಮಾಡುವ, ಜನರನ್ನು ಜಾಗೃತಗೊಳಿಸುವ ಕೆಲಸವನ್ನು ನಾಟಕಗಳು, ಸಾಹಿತಿಗಳು ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಹೂಲಿ ಶೇಖರ ಅವರ ವಿಷಯಗಳ ಆಯ್ಕೆ, ವಿಭಿನ್ನ ರಚನೆಯ ಬಗ್ಗೆ ಅಧ್ಯಯನ ಆಗಬೇಕು. ಜಾನಪದ, ದೇಸಿ ಭಾಷೆ, ನುಡಿಗಟ್ಟುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ’ ಎಂದರು.

ಮುಖ್ಯ ಅತಿಥಿಯಾಗಿ ಸಾಹಿತಿ ಬಸು ಬೇವಿನಗಿಡದ ಮಾತನಾಡಿ, ‘ಕತೆ, ನಾಟಕ, ಕಾದಂಬರಿಗಳ ಆಶಯ ಒಂದೇ ಆಗಿರುತ್ತದೆ. ಬ್ರಿಟಿಷರು ಮಾತ್ರ ನಮ್ಮನ್ನು ಕೊಲ್ಲಲಿಲ್ಲ. ಅವರ ಪರವಾಗಿ ಆಡಳಿತ ನಡೆಸುತ್ತಿದ್ದ ನಮ್ಮವರೂ ಕೊಂದರು’ ಎಂದರು.

‘ಸ್ವಾತಂತ್ರ್ಯದ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯದ ಹೋರಾಟವೂ ಆಗಿತ್ತು. ‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಹೊರಗಿನ ಶತ್ರುಗಳಷ್ಟೇ ಒಳಗಿನ ಶತ್ರುಗಳು ಅಪಾಯಕಾರಿ. ಮೇಲ್ವರ್ಗದವರು, ಶ್ರೀಮಂತರು ಶೂದ್ರರನ್ನು ಹತ್ತಿಕ್ಕುತ್ತಾರೆ ಎನ್ನುವುದನ್ನು ತೋರಿಸುತ್ತದೆ’ ಎಂದು ಹೇಳಿದರು.

ಕೃತಿಕಾರ ಹೂಲಿ ಶೇಖರ್ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟ ಕುರಿತು ಉತ್ತರ ಕರ್ನಾಟಕದವರೇ ಹೆಚ್ಚು ಬರೆದಿದ್ದಾರೆ. ಇತಿಹಾಸದಲ್ಲಿ ಹಲವಾರು ಪಾಠಗಳಿದ್ದು, ಅವುಗಳನ್ನು ಕಲಿತು ಮುಂದೆ ಸಾಗಿದಾಗಲೇ ಸಾಧನೆ ಸಾಧ್ಯ’ ಎಂದರು.

ಕೃತಿ ಕುರಿತು ಮಾತನಾಡಿದ ಚಂದ್ರಶೇಖರ್ ಹೆಗಡೆ, ‘ಹೂತು ಹೋಗಬಹುದಾಗಿದ್ದ ಅಮಟೂರು ಬಾಳಪ್ಪ ಅವರನ್ನು ನಾಟಕಕಾರರು  ಕೃತಿ ರಚನೆ ಮೂಲಕ ಜೀವಂತವಾಗಿರಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಯುದ್ಧಗಳ ವಿರುದ್ಧ ಬಾಳಪ್ಪ ಅವರ ಹೋರಾಟದ ಕೆಚ್ಚೆದೆ ಪ್ರದರ್ಶಿಸಬೇಕು’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ವೈ.ಎಂ. ಯಾಕೊಳ್ಳಿ ಕೃತಿ ಪರಿಚಯಿಸಿದರು. ಪ್ರಕಾಶಕರಾದ ಶಾಲಿನಿ ಪ್ರದೀಪ್‌ ಉಪಸ್ಥಿತರಿದ್ದರು

ಪುಸ್ತಕ ಪರಿಚಯ

ಕೃತಿ ಹೆಸರು: ಸ್ವಾತಂತ್ರ್ಯದ ಕಿಡಿಗಳು

ಲೇಖಕ: ಹೂಲಿ ಶೇಖರ

ಪ್ರಕಟಣೆ: ಆಕೃತಿ ಕನ್ನಡ ಪ್ರಕಾಶನ ದರ: ₹150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.