ರಬಕವಿಬನಹಟ್ಟಿ: ಗಣೇಶೋತ್ಸವದ ಸಂಭ್ರಮ ಗರಿಗೆದರಿದ್ದು, ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು ಸೆಳೆಯುತ್ತಿವೆ.
ಇಲ್ಲಿಯ ಚವಾಣ ಮನೆತನದವರು ಶತಮಾನಗಳಿಂದ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಜ್ಜ ರಾಮಾಚಾರಿ, ಅಜ್ಜಿ ಕಮಲವ್ವ, ಮಗ ದಾನೇಶ್ವರ, ಪತ್ನಿ ವೀಣಾ ಮತ್ತು ಮಕ್ಕಳಾದ ರಾಹುಲ ಹೀಗೆ ಗಣೇಶ ವಿಗ್ರಹ ಮಾಡುವ ಕಾಯಕವು ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ. ಮೊದಲಿನಿಂದಲೂ ಈ ಕುಟುಂಬ ಮಣ್ಣಿನ ವಿಗ್ರಹಗಳನ್ನೇ ಮಾಡುತ್ತಿದೆ.
ಇವರು ಈ ಬಾರಿ ಮುನ್ನೂರಕ್ಕೂ ಹೆಚ್ಚು ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ಮಾಣ ಮಾಡಿದ್ದಾರೆ. ₹250ರಿಂದ ₹ 5 ಸಾವಿರದ ವರೆಗೂ ವಿಗ್ರಹಗಳು ಮಾರಾಟವಾಗುತ್ತಿವೆ.
‘ಮಣ್ಣಿನ ಮೂರ್ತಿಗಳನ್ನು ನಿರ್ಮಾಣ ಮಾಡುವುದು ಕಠಿಣವಾದ ಕಾರ್ಯ. ಗೋಕಾಕ ಸಮೀಪದ ತಾವರಗೇರಿಯಿಂದ ಮಣ್ಣು ತಂದು, ನಾಲ್ಕಾರು ಬಾರಿ ಸ್ವಚ್ಛಗೊಳಿಸಿ ಹದವಾಗಿ ನೆನೆಸಿ ನಂತರ ಮೂರ್ತಿಗಳನ್ನು ತಯಾರಿಸಬೇಕಾಗುತ್ತದೆ. ಮೂರು ತಿಂಗಳು ಮೊದಲೇ ವಿಗ್ರಹಗಳನ್ನು ಮಾಡಲು ಆರಂಭಿಸುತ್ತೇವೆ. ನಾವು ಬಳಸುವ ಬಣ್ಣ ಕೂಡ ನೈಸರ್ಗಿಕವಾಗಿದೆ. ಶಾಸ್ತ್ರ ಬದ್ಧವಾದ ಮೂರ್ತಿಗಳನ್ನು ತಯಾರಿಸುತ್ತೇವೆ’ ಎನ್ನುತ್ತಾರೆ ರಾಹುಲ ಚವಾಣ.
ಈ ಕುಟುಂಬ ಇವುಗಳ ಜೊತೆಗೆ ಕಾಮಣ್ಣ ವಿಗ್ರಹ, ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಗೌರಿ ಮೂರ್ತಿಗಳು ಮತ್ತು ಕೃಷ್ಣನ ಮೂರ್ತಿ ಸೇರಿದಂತೆ ವಿವಿಧ ದೇವರ ವಿಗ್ರಹಗಳನ್ನು ಮಾಡುವಲ್ಲಿ ಎತ್ತಿದ ಕೈ.
ರಬಕವಿ ರಾಂಪುರ, ಬನಹಟ್ಟಿ, ಹೊಸೂರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಕುಟುಂಬದವರು ಕಾಯಂ ಆಗಿ ಇವರಿಂದಲೇ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.