ADVERTISEMENT

ಬೀಳಗಿ: ಶಿಕ್ಷಣ ಗುಣಮಟ್ಟ ಸುಧಾರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:11 IST
Last Updated 8 ಅಕ್ಟೋಬರ್ 2025, 6:11 IST
ಬೀಳಗಿ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ನಂತರ ಶಾಸಕ ಜೆ.ಟಿ.ಪಾಟೀಲ ಹಾಗೂ ಸದಸ್ಯರು ಹೊರಬಂದರು
ಬೀಳಗಿ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ನಂತರ ಶಾಸಕ ಜೆ.ಟಿ.ಪಾಟೀಲ ಹಾಗೂ ಸದಸ್ಯರು ಹೊರಬಂದರು   

ಬೀಳಗಿ: ಸ್ಥಳೀಯ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕಲಿಕೆಯ ಕೊರತೆ ಹಾಗೂ ಅಶಿಸ್ತಿನ ಕಾರಣದಿಂದ 2025-26ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ  ಕಡಿಮೆಯಾಗಿದ್ದನ್ನು ಗಮನಿಸಿದ ಶಾಸಕ ಜೆ.ಟಿ. ಪಾಟೀಲ ಪ್ರಾಚಾರ್ಯರ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆಯಿತು.

ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಮಾಹಿತಿಯನ್ನು ಪಡೆದುಕೊಂಡು ಅವರು ಮಾತನಾಡಿದರು.

ಸ್ಥಳೀಯವಾಗಿ ಎರಡು ಹೊಸದಾಗಿ ಕಾಲೇಜುಗಳು ಪ್ರಾರಂಭವಾದ ಕಾರಣದಿಂದಾಗಿ ನಮಗೆ ಈ ಬಾರಿ ಪ್ರವೇಶಾತಿಯಲ್ಲಿ ಕಡಿಮೆಯಾಗಿದೆ ಎಂದು ಪ್ರಾಚಾರ್ಯೆ ಶ್ರೀದೇವಿ ಪಾಟೀಲ ಮಾಹಿತಿ ನೀಡಿದರು. ಅದಕ್ಕೆ ಒಪ್ಪದ ಶಾಸಕ ಜೆ. ಟಿ. ಪಾಟೀಲ,  ದಾಖಲಾತಿ ಕಡಿಮೆಯಾಗಲು ಇದು ಸರಿಯಾದ ಕಾರಣವಲ್ಲ. ಮೊದಲು ವ್ಯವಸ್ಥಿತವಾಗಿ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಆಗ ಜನರು ಕಾಲೇಜನ್ನು ಹುಡುಕಿಕೊಂಡು ಬರುತ್ತಾರೆ ಎಂದು ತಿಳಿಸಿದರು.

ADVERTISEMENT

ಕಾಲೇಜು ಅಭಿವೃದ್ಧಿಗಾಗಿ ಇರುವ ₹62 ಲಕ್ಷ ಅನುದಾನವನ್ನು ಶೌಚಾಲಯ, ಶುದ್ಧ ಕುಡಿಯುವ ನೀರು, ಗ್ರಂಥಾಲಯ ಹಾಗೂ ಇನ್ನಿತರ ಮೂಲ ಸೌಲಭ್ಯಗಳಿಗಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರವಿ ಕಾಂಬಳೆ ಅವರು ಕಾಲೇಜಿನ ಗ್ರಂಥಾಲಯದ ವ್ಯವಸ್ಥೆ ಹಾಗೂ ಕಂಪ್ಯೂಟರ್ ತರಗತಿಗಳ ಸಮಸ್ಯೆಗಳ ಕುರಿತು ದಾಖಲೆ ಸಮೇತ ಶಾಸಕರ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಶಾಸಕರು,  ಹಿಂದಿನ ಅವಧಿಯ ಪ್ರಾಚಾರ್ಯ ಸುನಿಲ್ ನಾರಾಯಣಿ ಅವರಿಗೆ ಸ್ವಂತ ಖರ್ಚಿನಲ್ಲಿ ಕಂಪ್ಯೂಟರ್ ರಿಪೇರಿ ಮಾಡಿಸಿ ಕೊಡಲು ಸೂಚಿಸಿದರು.

ಜತೆಗೆ ಕಾಲೇಜು ಅಭಿವೃದ್ಧಿ, ವಿದ್ಯಾರ್ಥಿಗಳ ಐಡಿ ಕಾರ್ಡ್, ಸಮವಸ್ತ್ರಗಳಿಗೆ ಬಳಕೆಯಾದ ಹಣ, ಸಭೆ ಸಮಾರಂಭಗಳಿಗೆ ಮಾಡಿದ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ ಕೂಡಲೇ ಸಮಿತಿಗೆ ನೀಡಬೇಕು ಎಂದು ಸೂಚಿಸಿದರು.

ಪ್ರತಿ ತಿಂಗಳ ಮೊದಲನೇ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜೋತಿಭಾ ಅವತಾಡೆ, ಪಡಿಯಪ್ಪ ಕರಿಗಾರ, ಬಿ.ವಾಯ್.ಲೋನಾರೆ, ಅಮಿರುದ್ದಿನ ಬಡೆಖಾನ, ಹನಮಂತ ಬಿದರಿ, ಸಿದ್ದು ದಳವಾಯಿ, ರಾಜು ತೊಳಮಟ್ಟಿ, ಅಶೋಕ ಕೊಲಾರ, ಶಾನ ಮುಲ್ಲಾ, ಪ್ರಾಚಾರ್ಯೆ ಶ್ರೀದೇವಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.