ADVERTISEMENT

ಬಹುಮಾನದ ಹಣದಲ್ಲಿ ಶಾಲೆಗೆ ಗಿಡ ತಂದ!

ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯ ಪರಿಸರ ಪ್ರೀತಿ

ವೆಂಕಟೇಶ್ ಜಿ.ಎಚ್
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
ಸಮರ್ಥ ಪರಾಂಡೆ ಜೊತೆ ಸೇರಿ ಬಾಗಲಕೋಟೆಯ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶುಕ್ರವಾರ ಗಿಡ ನೆಟ್ಟರು. ಈ ವೇಳೆ ನಗರಸಭೆ ಆಯುಕ್ತ ಗಣಪತಿ ಪಾಟೀಲ, ಶಾಲೆಯ ಪ್ರಾಚಾರ್ಯ ಪದ್ಮನಾಭನ್ ಹಾಗೂ ಮಕ್ಕಳು ಇದ್ದರು.
ಸಮರ್ಥ ಪರಾಂಡೆ ಜೊತೆ ಸೇರಿ ಬಾಗಲಕೋಟೆಯ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶುಕ್ರವಾರ ಗಿಡ ನೆಟ್ಟರು. ಈ ವೇಳೆ ನಗರಸಭೆ ಆಯುಕ್ತ ಗಣಪತಿ ಪಾಟೀಲ, ಶಾಲೆಯ ಪ್ರಾಚಾರ್ಯ ಪದ್ಮನಾಭನ್ ಹಾಗೂ ಮಕ್ಕಳು ಇದ್ದರು.   

ಬಾಗಲಕೋಟೆ: ಚಿತ್ರಕಲೆ ಸ್ಪರ್ಧೆಯಲ್ಲಿ ಬಂದ ಬಹುಮಾನದ ಹಣದಿಂದ ಶಾಲೆಗೆ ಗಿಡಗಳ ಖರೀದಿಸಿ ತಂದ ಇಲ್ಲಿನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಸಮರ್ಥ್ ಎಸ್.ಪರಾಂಡೆ ಕಾರ್ಯ ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾಗಿದೆ.

ವಿಷಯ ತಿಳಿದು ಸ್ವತಃ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶುಕ್ರವಾರ ಶಾಲೆಗೆ ಬಂದು ವಿದ್ಯಾರ್ಥಿಯನ್ನು ಅಭಿನಂದಿಸಿದರು. ಸಮರ್ಥನಬೆನ್ನು ತಟ್ಟಿ ತಾವೇ ಮುಂದಾಗಿ ಗಿಡ ನೆಟ್ಟರು.

ಕೇಂದ್ರೀಯ ವಿದ್ಯಾಲಯದಲ್ಲಿ ಐದನೇ ತರಗತಿ ಓದುವ ಸಮರ್ಥ ಗದ್ದನಕೇರಿಯ ಸೂರ್ಯಕಾಂತ ಪರಾಂಡೆ ಹಾಗೂ ರೇಣುಕಾ ದಂಪತಿ ಪುತ್ರ. ಸೂರ್ಯಕಾಂತ ವಾಯವ್ಯ ಸಾರಿಗೆ ಸಂಸ್ಥೆ ಬೀಳಗಿ ಡಿಪೋದಲ್ಲಿ ಚಾಲಕರಾಗಿದ್ದಾರೆ.

ADVERTISEMENT

ಬಹುಮಾನದ ಹಣ:

ಕಳೆದ ಸೆಪ್ಟೆಂಬರ್‌ನಲ್ಲಿ ಇಲ್ಲಿನ ವಿದ್ಯಾಗಿರಿಯ ಬಸವೇಶ್ವರ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಯೋಜಿಸಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸಮರ್ಥ, ಅಲ್ಲಿ ಆನೆ ಹಾಗೂ ಕಾಡಿನ ಚಿತ್ರ ಬರೆದು ಪ್ರಥಮ ಸ್ಥಾನ ಪಡೆದಿದ್ದನು. ಆಗ ಸಂಘಟಕರು ಬಹುಮಾನದ ರೂಪದಲ್ಲಿ ನಗದು ₹1500 ಕೊಟ್ಟಿದ್ದರು. ಅದರಲ್ಲಿ 50 ಗಿಡಗಳನ್ನು ಖರೀದಿಸಿ ಶಾಲೆಗೆ ತಂದಿದ್ದನು.

‘ದಿನೇ ದಿನೇ ವೆಹಿಕಲ್ ಜಾಸ್ತಿ ಆಗಾಕತ್ಯಾವ, ಕಾರ್ಬನ್ ಡೈಆಕ್ಸೈಡ್ ಪ್ರಕೃತಿಗೆ ಸೇರಿ ಮನುಷ್ಯಂಗ ರೋಗಗಳು ಬರಾಕತ್ತ್ಯಾವ, ಅದನ್ನ ನಾ ಪೇಪರ್‌ನ್ಯಾಗ ಓದೀನಿ. ಗಿಡ–ಮರ ಇದ್ರ ವಾಯು ಶುದ್ಧ ಇರ್ತದ, ಯಾವ ಬ್ಯಾನೀನೂ ಬರೊಲ್ರಿ, ಅದಕ್ಕಾ ಗಿಡ ತರೋ ಯೋಚ್ನಿ ಮಾಡೀನ್ರಿ’ ಎಂದು ಸಮರ್ಥ ‘ಪ್ರಜಾವಾಣಿ’ ಎದುರು ಮುಗ್ಧವಾಗಿ ಹೇಳಿಕೊಂಡನು.

ಅಪ್ಪ–ಅಮ್ಮನ ಬೆಂಬಲ:

ಶಾಲೆಗೆ ಗಿಡ ಕೊಡುವ ಮಗನ ನಿರ್ಧಾರವನ್ನು ಬೆಂಬಲಿಸಿದ ಪೋಷಕರು, ಗದ್ದನಕೇರಿ ಕ್ರಾಸ್‌ನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಮಗನನ್ನು ಕರೆದೊಯ್ದು ಅಲ್ಲಿ ಗಿಡಗಳನ್ನು ಗುರುವಾರ ಕೊಡಿಸಿ ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. ಮೊದಲ ಕಂತಿನಲ್ಲಿ 25 ಗಿಡಗಳನ್ನು ತಂದಿದ್ದು, ಅದರಲ್ಲಿ ತಲಾ ಐದು ಬೇವು, ಆಲ, ಹುಣಸೆ, ಬಸರಿ ಹಾಗೂ ವಿವಿಧ ಜಾತಿಯ ಹೂವಿನ ಗಿಡಗಳು ಸೇರಿವೆ.

ತರಗತಿಯಲ್ಲೂ ಮುಂದೆ:

ಸಮರ್ಥ ಓದುವುದರಲ್ಲೂ ಜಾಣನಿದ್ದಾನೆ. ಕ್ಲಾಸಿನಲ್ಲಿ ಅವನೇ ಫಸ್ಟ್ ಎಂದು ಕ್ಲಾಸ್ ಟೀಚರ್ ಅಲ್ಲಾಭಕ್ಷ ತಮ್ಮ ವಿದ್ಯಾರ್ಥಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಣ್ಣವನಿದ್ದಾಗಿನಿಂದಲೂ ಸಮರ್ಥನಿಗೆ ಗಿಡ–ಮರ, ಪ್ರಾಣಿ–ಪಕ್ಷಿ ಅಂದರೆ ಬಹಳ ಪ್ರೀತಿ. ಬಹುಮಾನದ ರೊಕ್ಕದಲ್ಲಿ ಬಟ್ಟೆ ಕೊಡಿಸುತ್ತೇನೆ ಅಂದರೆ ಬೇಡ ಅಂದ. ಹಗಿ (ಸಸಿ) ಕೊಡಿಸಲು ಕೇಳಿದ. ಅವನ ಆಸೆಗೆ ನಾವು ಬೆಂಬಲವಾಗಿ ನಿಂತೆವು‘ ಎಂದು ಸೂರ್ಯಕಾಂತ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.