ಜಮಖಂಡಿ: ತಾಲ್ಲೂಕಿನ ಸಾವಳಗಿ-ತೆಲಸಂಗ ರಸ್ತೆಯಲ್ಲಿ ಸಾವಳಗಿ ಜಾಧವ ತೋಟದ ಹತ್ತಿರ ರೈತರೊಬ್ಬರು ರಸ್ತೆಯ ಮೇಲೆ ಕಲ್ಲು, ಮುಳ್ಳಿನ ಕಂಟಿಗಳನ್ನು ಹಾಕಿ ಒತ್ತುವರಿ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ರಾತ್ರಿ ಹಲವು ಅಪಘಾತಗಳು ಸಂಭವಿಸುತ್ತಿವೆ.
ಒಂದು ವರ್ಷದಿಂದ ರಸ್ತೆಯ ಪಕ್ಕಕ್ಕೆ ಹಾಕಿರುವ ಗರಸು ಹಾಗೂ ಕಲ್ಲುಗಳನ್ನು ಅಗೆದು ರಸ್ತೆಯ ಮೇಲೆ ಹಾಕುತ್ತಾ ಬಂದಿದ್ದಾರೆ. ಇಗ ಡಾಂಬರ್ ರಸ್ತೆಯವರೆಗೆ ಅಗೆದಿದ್ದು, ದಿನದಿಂದ ದಿನಕ್ಕೆ ರಸ್ತೆಯನ್ನು ಅಗೆದು ಒತ್ತುವರಿ ಮಾಡುತ್ತ ಬರುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಒತ್ತುವರಿ ಮಾಡಿದ ರೈತನ ತೋಟದ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ವಿದ್ಯಾರ್ಥಿಗಳು ರಸ್ತಯ ಮೇಲೆ ಹೋಗಲು ಪರದಾಡುವ ಸ್ಥಿತಿ ಇದೆ. ದೊಡ್ಡ ವಾಹನಗಳು ಬಂದರೆ ವಾಹನದ ಗಾಳಿಗೆ ರಸ್ತೆಯ ಮೇಲೆ ಸಣ್ಣ ಸಣ್ಣ ಮುಳ್ಳಿನ ಕಂಟಿಗಳು ಬಂದು ಬೀಳುತ್ತಿವೆ. ವಿದ್ಯಾರ್ಥಿಗಳು ಸೈಕಲ್ ಮೇಲೆ ಶಾಲೆಗೆ ಬರುವಾಗ ಮುಳ್ಳು ತಾಗಿ ಸೈಕಲ್ ಪಂಚರ್ ಆಗುವ ಸಮಸ್ಯೆ ಸಾಮಾನ್ಯವಾಗಿದೆ.
ರಾತ್ರಿ ಹಾಗೂ ಮಳೆ ಬರುವ ಸಮಯದಲ್ಲಿ ರಸ್ತೆಯ ಮೇಲೆ ಹಾಕುತ್ತಿರುವ ಕಲ್ಲುಗಳು ಹಾಗೂ ಮುಳ್ಳಿನ ಕಂಟಿಗಳಿಂದ ಸಂಚಾರಕ್ಕೆ ಅಡೆತಡೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ‘ನಾವು ಹಲವು ಬಾರಿ ನಮ್ಮ ಬೈಕ್ ನಿಲ್ಲಿಸಿ ಕಲ್ಲುಗಳನ್ನು ತೆಗೆದು ಹಾಕಿದ್ದರೂ ಮತ್ತೆ ರಸ್ತೆಯ ಮೇಲೆ ಹಾಕುತ್ತಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಯಾಣಿಕ ಬಸವರಾಜ ಹಿಪ್ಪರಗಿ ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಒತ್ತುವರಿ ತೆರವುಗೊಳಿಸಲು ಸೂಚಿಸುತ್ತೇನೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದುಅನಿಲ ಬಡಿಗೇರ, ತಹಶೀಲ್ದಾರ್
ಪೊಲೀಸ್ ದೂರು ನೀಡಿದ್ದರೂ ಕ್ರಮವಾಗಿಲ್ಲ
ಸಾವಳಗಿ-ತೆಲಸಂಗ ರಸ್ತೆಯಲ್ಲಿ ರೈತರೊಬ್ಬರು ರಸ್ತೆಯ ಬದಿಯನ್ನು ಅಗೆದು ಒತ್ತುವರಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ರಸ್ತೆಯ ಮೇಲೆ ಕಲ್ಲು ಮುಳ್ಳಿನ ಕಂಟಿ ಹಾಕದಂತೆ ತಿಳಿಸಿದರು ಕೇಳುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಇ ಎಸ್.ಆರ್. ಬಂಡಿವಡ್ಡರ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.