ಜಮಖಂಡಿ: ‘ತಾಲ್ಲೂಕಿನ ಶೂರ್ಪಾಲಿ, ತುಬಚಿ ಗ್ರಾಮದಲ್ಲಿ 2024-25ನೇ ಸಾಲಿನಲ್ಲಿ ಕೃಷ್ಣಾ ನದಿಯ ಪ್ರವಾಹದದಿಂದ ಆದ ಬೆಳೆ ಹಾನಿಗೆ ರೈತರಿಗೆ ಪರಿಹಾರ ನೀಡಲಾಗಿದ್ದು, ಈಗ ಅಧಿಕಾರಿಗಳು ಆ ಮೊತ್ತವನ್ನು ಮರಳಿ ಪಡೆಯಲು ಪೊಲೀಸರ ಮೂಲಕ ರೈತರಿಗೆ ಕಿರಿಕಿರಿ ಮಾಡುತ್ತಿದ್ದಾರೆ’ ಎಂದು ರೈತ ಸಾಂತ್ವನ ಕೇಂದ್ರದ ಅಧ್ಯಕ್ಷ ಸಿ.ಆರ್. ಸುತಾರ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಎರಡು ಸರ್ವೆ ನಂಬರಿನ ಜಮೀನುಗಳಿವೆ. ಅದರಲ್ಲಿ ನದಿ ತೀರದ ಸರ್ವೆ ನಂಬರಿನ ಜಮೀನಿನಲ್ಲಿ ಆದ ಬೆಳೆಹಾನಿಗೆ ಪರಿಹಾರ ನೀಡುವ ಬದಲು, ನದಿ ದಡದಿಂದ ದೂರ ಇರುವ, ಮುಳುಗಡೆ ಆಗದ ಜಮೀನಿನಮ ಸರ್ವೆ ಸಂಖ್ಯೆಯನ್ನು ಬಳಸಿಕೊಂಡು ಬೆಳೆ ಪರಿಹಾರ ನೀಡಿದ್ದಾರೆ. ಅವರೇ ತಪ್ಪು ಮಾಡಿ ಈಗ ರೈತರ ಮೇಲೆ ದಬ್ಬಾಳಿಕೆಯಿಂದ ಪರಿಹಾರ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದರು.
‘34ಕ್ಕೂ ಅಧಿಕ ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪರಿಹಾರ ವಾಪಸ್ ಪಡೆದುಕೊಳ್ಳಲು ನಿಯಮಗಳಿವೆ. ಅದನ್ನು ಬಿಟ್ಟು ಪೊಲೀಸರಿಂದ ನೋಟಿಸ್ ಕಳುಹಿಸಿ ರೈತರನ್ನು ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.
‘ಅಧಿಕಾರಿಗಳು ಇದನ್ನು ಸರಿಪಡಿಸಿಕೊಂಡು ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಬಾಬಾಗೌಡ ಪಾಟೀಲ, ಸುಭಾಸ ಪಾಟೀಲ, ರಮೇಶ ಪಾಟೀಲ, ಗಿರಮಲ್ಲಪ್ಪ ಅಂಬಿ, ಗುರುಪಾದ ಕುಂಚನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.