ADVERTISEMENT

‘ರೈತ ವಿರೋಧಿ ಕಾಯ್ದೆ ಹಿಂಪಡೆಯಿರಿ’

ರೈತರು, ಜೆಡಿಎಸ್ ಕಾರ್ಯಕರ್ತರು, ಕಾರ್ಮಿಕರಿಂದ ಪಟ್ಟಣದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:09 IST
Last Updated 29 ಸೆಪ್ಟೆಂಬರ್ 2020, 8:09 IST
ಗುಳೇದಗುಡ್ಡದಲ್ಲಿ ರೈತರು, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಗುಳೇದಗುಡ್ಡದಲ್ಲಿ ರೈತರು, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಗುಳೇದಗುಡ್ಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋದಿ ನೀತಿ ಖಂಡಿಸಿ ರೈತ ಸಂಘಟನೆ, ಜೆಡಿಎಸ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಪ್ರತಿಭಟನಾ ಮೆರವಣಿಗೆ ಪುರಸಭೆ ಹತ್ತಿರದ ಸಾರ್ವಜನಿಕ ಕಟ್ಟೆಯಿಂದ ಹೊರಟು ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟೆ, ಚೌಬಜಾರ, ಅರಳಿಕಟ್ಟೆ ಮಾರ್ಗದ ಮೂಲಕ ಸಾರ್ವಜನಿಕ ಕಟ್ಟೆ ತಲುಪಿತು. ‘ರೈತ, ಕಾರ್ಮಿಕರ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಬಮಂತ ಮಾವಿನಮರದ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸಿವೆ. ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಹಿಂಪಡೆ
ಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮುತ್ತಣ್ಣ ದೇವರಮನಿ, ವಿ.ಆರ್. ಚವ್ಹಾಣ, ಚಂದ್ರಕಾಂತ ಶೇಖ್‌, ರಂಗಪ್ಪ ಉಪ್ಪಾರ, ಪುಂಡಪ್ಪ ಬೇವಿನಮಟ್ಟಿ, ಮಲ್ಲಯ್ಯ ಹಿರೇಮಠ, ಬಸವರಾಜ ಹಲಕುರ್ಕಿ, ಗುಂಡಪ್ಪ ಕೋಟಿ, ರಾಮಣ್ಣ ಪೂಜಾರ, ಶೇಖರ ರಾಠೋಡ, ಪರ್ವತಿ, ಕೋಟೆಕಲ್ಲ, ಹಾನಾಪೂರ, ಹುಲ್ಲಿಕೇರಿ, ತೋಗುಣಸಿ, ಆಸಂಗಿ-
ಕಟಗಿನಹಳ್ಳಿ, ಪಾದನಕಟ್ಟಿ, ಹಳದೂರ, ಅಲ್ಲೂರ ರೈತರು, ಕಾರ್ಮಿಕರು ಪಾಲ್ಗೊಂಡಿದ್ದರು.

ADVERTISEMENT

ಕುಳಗೇರಿ ಕ್ರಾಸ್ ವರದಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಸೋಮವಾರ ಕುಳಗೇರಿ ಹೋಬಳಿಯ ಸುತ್ತಮುತ್ತಲಿನ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅರ್ಧ ಗಂಟೆಗಳ ಕಾಲ ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ 218 ತಡೆದು ಪ್ರತಿಭಟಿಸಿದರು.

ಖಾನಾಪೂರ ಎಸ್.ಕೆ ಗ್ರಾಮದ ರೈತ ಶೇಖಪ್ಪ ಪವಾಡಿನಾಯ್ಕರ ಉರುಳಿ ಸೇವೆ ಮಾಡಿ ಗಮನ ಸೆಳೆದರು.

ರಾಷ್ಟ್ರೀಯ ಹೆದ್ದಾರಿ 218ರ ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ರಾಜ್ಯ ಹೆದ್ದಾರಿ 14 ರ ಸವದತ್ತಿ – ಐಹೊಳೆ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಬಂದ ಮಾಡಿದ ಹಿನ್ನೆಲೆಯಲ್ಲಿ ವಾಹನಗಳು ಸಾಲುಗಟ್ಟಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.