ಬೀಳಗಿ: ಕಲಾವಿದರ ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು. ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಸಾವಕಾರ ಒತ್ತಾಯಿಸಿದರು.
ತಾಲ್ಲೂಕಿನ ಬಾಡಗಿಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಆಶ್ರಯದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ವಲಯ ಘಟಕ ಬಾಡಗಿಯ ಉದ್ಘಾಟನೆ, ಪದಗ್ರಹಣ, ಜಾನಪದ ಸಂಭ್ರಮ ಹಾಗೂ ಕಪಿರಾಯನ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಕಲಾವಿದರು ಇಂದಿನ ಯುವಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಿ ವಿದ್ಯೆಯನ್ನು ಧಾರೆಯೆರೆದು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಕಲಾವಿದರು ದುಶ್ಚಟಗಳಿಗೆ ದಾಸರಾಗದೆ ಕಲಾಸೇವೆ ನಿಷ್ಠೆಯಿಂದ ಮಾಡಬೇಕು ಎಂದು ಹೇಳಿದರು.
ಬಕ್ಕೇಶ್ವರ ಮಠದ ಬಕ್ಕಯ್ಯ ಸ್ವಾಮೀಜಿ ಮಾತನಾಡಿ, ಗುರುವಿಗೆ ಶರಣಾಗತರಾದರೆ ವಿದ್ಯೆ ಒಲಿಯುತ್ತದೆ. ನಾನೆಂಬ ಅಹಂಕಾರ ಸಲ್ಲದು. ಗುರುವಿನ ಮೇಲೆ ನಂಬಿಕೆ ಇಟ್ಟಾಗ ಕಲೆಯು ಒಲಿಯುತ್ತದೆ. ಅಹಂಕಾರವಿಲ್ಲದೆ ಸಂಗೀತ ಕಲಾದೇವಿಯ ಸೇವೆ ಮಾಡಬೇಕು ಎಂದರು.
ಮುಗಳಖೋಡದ ಶರಣಬಸವ ಶಾಸ್ತ್ರಿಗಳು ಮಾತನಾಡಿ, ಕಲೆ ವಿಶಿಷ್ಟವಾದುದು. ಜನಪದ ಇರುವವರೆಗೆ ಜಗತ್ತು ಇರುತ್ತದೆ. ಕಲೆ ಎಂಬುದೊಂದು ಪರ್ವತವಿದ್ದಂತೆ ಎಂದು ಹೇಳಿದರು. ಕೋಲೂರ ಗ್ರಾಮದ ಕೃಷ್ಣಗೌಡ ಪಾಟೀಲ,ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಬಿ. ನಬಿವಾಲೆ ಮಾತನಾಡಿದರು.
ಭಜನೆ, ಸೋಬಾನೆ, ಚೌಡಕಿ ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಕಲಾತಂಡಗಳ ಕಲಾವಿದರು ಪ್ರದರ್ಶನ ನೀಡಿದರು. ಖಜಾಂಚಿ ಸುರೇಶ ವಸ್ತ್ರದ, ವಿಶ್ರಾಂತ ಶಿಕ್ಷಕ ಎಸ್.ಕೆ. ಶೆಟ್ಟರ, ಕನ್ನಡ ಜಾನಪದ ಪರಿಷತ್ ಬಾಡಗಿ ವಲಯ ಘಟಕದ ಅಧ್ಯಕ್ಷ ದಯಾನಂದ ಪೂಜಾರಿ, ಕಾರ್ಯದರ್ಶಿ ರುದ್ರಪ್ಪ ತಂಬಾಕದ, ಕಜಾಪ ತಾಲ್ಲೂಕಾಧ್ಯಕ್ಷ ಬಿ.ಬಿ. ನಾಯ್ಕ, ಕಾರ್ಯದರ್ಶಿ ಎಂ.ಬಿ. ತಾಂಬೋಳಿ ಇದ್ದರು. ಮಹೇಶ ಜೀರ ನಿರೂಪಿಸಿದರು. ಸುರೇಶ ಹೊಸಗೌಡರ ಸ್ವಾಗತಿಸಿದರು. ಹುಸೇನ ರಾಜಪಾಲೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.