ಬಾಗಲಕೋಟೆ: ನವನಗರದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಪಕ್ಕ, ಎದುರಿನ ಫುಟ್‌ಪಾತ್ ಅತಿಕ್ರಮಣವಾಗಿದೆ. ಇದರಿಂದಾಗಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಪೊಲೀಸ್ ಠಾಣೆಯ ಒಳಗೆ, ಹೊರಗೆ ಹೋಗಬೇಕಾದರೆ ಫುಟ್‌ಪಾತ್ ಅತಿಕ್ರಮಣವಾಗಿರುವುದು ಕಾಣುತ್ತದೆ. ಆದರೂ, ಸಂಚಾರಿ ಪೊಲೀಸರು ಜಾಣ ಮೌನ ವಹಿಸಿದ್ದಾರೆ. ನವನಗರ ನಿರ್ವಹಣೆ ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ತನಗೆ ಸಂಬಂಧವಿಲ್ಲ ಎನ್ನುವಂತಿದೆ.
ಪೊಲೀಸ್ ಠಾಣೆ ಮುಂದೆ ನಿಂತು ಹೆಲ್ಮೆಟ್ ಇಲ್ಲದೇ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಲಾಗುತ್ತದೆ. ಆ ಮೂಲಕ ಅವರಿಗೆ ಜೀವರಕ್ಷಣೆಯ ಪಾಠ ಹೇಳಲಾಗುತ್ತದೆ. ಆದರೆ, ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪಾದಚಾರಿಗಳ ಬಗೆಗೆ ಕಾಳಜಿ ತೋರಿಸುತ್ತಿಲ್ಲ.
ಸಂಚಾರಿ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿರುವ ಸ್ಟೀಟ್ ಅಂಗಡಿ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡಿದೆ. ಅಲ್ಲಿ ಸಂಜೆ ಗ್ರಾಹಕರಿಗೆ ಕುಳಿತುಕೊಳ್ಳಲು ಟೇಬಲ್, ಕುರ್ಚಿ ಹಾಕಲಾಗುತ್ತದೆ. ಅಲ್ಲಿಂದ ಹೋಗುವವರು ರಸ್ತೆ ಇಳಿದು ಮತ್ತೇ ಫುಟ್‌ಪಾತ್ ಹತ್ತಬೇಕಾದ ಸ್ಥಿತಿ ಇದೆ.
ಠಾಣೆ ಅನತಿ ದೂರದಲ್ಲಿರುವ ಎದುರುಗಡೆಯಲ್ಲಿಯೂ ಅಂಗಡಿಗಳನ್ನು ಇಡಲಾಗಿದ್ದು, ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕೂಗಳತೆ ದೂರದಲ್ಲಿರುವ ತಹಶೀಲ್ದಾರ್, ಉಪವಿಭಾಗದ ಕಚೇರಿ ಮುಂದಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಫುಟ್‌ಪಾತ್ ಜಾಗದಲ್ಲಿ ಸಾಕಷ್ಟು ಗೂಡಂಗಡಿಗಳನ್ನು ಇಡಲಾಗಿದ್ದರೂ, ಸಂಚಾರಿ ಪೊಲೀಸರಿಗೆ ಕಾಣದಿರುವುದು ಸೋಜಿಗ. ಪಾದಚಾರಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದಾಗಿ ಆಗಾಗ ಅಪಘಾತಗಳು ನಡೆಯುತ್ತವೆ.
ಒಂದೆಡೆ ಜಿಲ್ಲಾಧಿಕಾರಿ ಕಚೇರಿ, ಒನ್ನೊಂದೆಡೆ ನವನಗರ ಬಸ್ ನಿಲ್ದಾಣ, ಮತ್ತೊಂದೆಡೆ ತಹಶೀಲ್ದಾರ್, ಉಪನೋಂದಣಿ ಅಧಿಕಾರಿ ಕಚೇರಿಗಳಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅವರಿಗೆ ಸುರಕ್ಷತೆ ಒದಗಿಸುವ ಕೆಲಸ ಆಗಬೇಕಿದೆ.
ಬಾಗಲಕೋಟೆಯ ಹಲವು ಪ್ರದೇಶ, ನವನಗರದ ವಿವಿಧೆಡೆಯೂ ಫುಟ್‌ಪಾತ್ ಅತಿಕ್ರಮಣವಾಗಿದೆ. ವೃತ್ತಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಂಚಾರಿ ಪೊಲೀಸರು ನಿತ್ಯ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಫುಟ್‌ಪಾತ್‌ನತ್ತ ಗಮನ ಹರಿಸುತ್ತಿಲ್ಲ.
ಫುಟ್‌ಪಾತ್ ಅತಿಕ್ರಮಣವಾಗಿರುವುದರಿಂದ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಯಾವುದಾದರೂ ವಾಹನ ಡಿಕ್ಕಿ ಹೊಡೆದರೆ ಕೇಳುವವರಿಲ್ಲರಾಜಶೇಖರ ಅಂಗಡಿ ವಾಹನ ಸವಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.