ಬಾದಾಮಿ: ಸಮೀಪದ ಹಳೇ ಮಹಾಕೂಟೇಶ್ವರ ಮಂದಿರದ ಆವರಣದ ಅಶ್ವತ್ಥಮರದಡಿ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ತದ್ದೇವಾಡಿ ಗ್ರಾಮದ ಅರಣ್ಯ ಇಲಾಖೆ ನೌಕರ ಸಿದ್ದಾರಾಮ ಗೌಡನೂರ ಜೊತೆಗೆ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದ ಶ್ರೇಯಾ ಹೊನಗೊಂಡ ಅವರ ವಿವಾಹವು ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ಜರುಗಿತು.
ಪರಿಸರವಾದಿ ಡಾ.ಪ್ರಕಾಶ ಭಟ್, ಸುನಂದಾ ಭಟ್ ದಂಪತಿ ಮಧುಮಕ್ಕಳಿಗೆ ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ಬೋಧಿಸಿದರು. ನಂತರ ನವ ದಂಪತಿ ಪ್ರತಿಜ್ಞಾವಿಧಿ ಹೇಳಿದರು.
‘ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಸಂಗತಿಗಳು ನನಗೆ ಗಾಢವಾದ ಪರಿಣಾಮ ಬೀರಿದ್ದರಿಂದ ಸರಳವಾದ ವರದಕ್ಷಿಣೆ ಇಲ್ಲದ, ದುಂದುವೆಚ್ಚ ಬೇಡವೆಂದು ಸರಳವಾಗಿ ಮದುವೆ ಮಾಡಿಕೊಂಡಿರುವೆ’ ಎಂದು ಸಿದ್ದಾರಾಮ ಹೇಳಿದರು.
ಸಿದ್ದು ಪೂಜಾರ ಮತ್ತು ಗಂಗಾಧರ ಮಾಲಗತ್ತಿಮಠ ಕುವೆಂಪುರವರ ಭಾವಗೀತೆ ಹಾಡಿದರು. ಹಂದಿರದಲ್ಲಿ ಕುವೆಂಪು ಭಾವಚಿತ್ರವನ್ನು ಹಾಕಲಾಗಿತ್ತು.
ವಧು-ವರನ ಸಂಬಂಧಿಕರು, ಸ್ನೇಹಿತರು ಮತ್ತು ಅಧಿಕಾರಿಗಳು ಸೇರಿ ನೂರು ಜನರು ಪಾಲ್ಗೊಂಡಿದ್ದರು. ನವದಂಪತಿಗೆ ಶುಭ ಕೋರಿದರು. ಮದುವೆ ಸಮಾರಂಭದ ನಂತರ ನವ ದಂಪತಿ ತುಳಸಿ ಗಿಡ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.