ADVERTISEMENT

ಗೋಹತ್ಯೆ ನಿಷೇಧ ಸಿಎಂ ಕಾರ್ಯಕ್ರಮವಲ್ಲ, ಆರ್‌ಎಸ್‌ಎಸ್‌ನದ್ದು: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 19:14 IST
Last Updated 12 ಡಿಸೆಂಬರ್ 2020, 19:14 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬಾಗಲಕೋಟೆ: ಗೋಹತ್ಯೆ ನಿಷೇಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯಕ್ರಮವಲ್ಲ. ಬದಲಿಗೆ ಅರ್ ಎಸ್ ಎಸ್ ನವರದ್ದು. ಅವರೇ ಸಿಎಂ ಮೇಲೆ ಒತ್ತಡ ಹಾಕಿ ಕಾಯ್ದೆ ಜಾರಿಗೊಳಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಾದ ಗೋವುಗಳನ್ನು ಸರ್ಕಾರವೇ ಖರೀದಿಸಲಿ ಎಂದು ಒತ್ತಾಯಿಸಿದರು.

ಗೋ ಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ.ಅದಕ್ಕೂ ಮುನ್ನ ತಜ್ಞರ ಜೊತೆ ಚರ್ಚಿಸಿದ್ದಾರಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ADVERTISEMENT

ಸಾಧಕ-ಬಾಧಕಗಳ ಅರಿವಿಲ್ಲದೇ ಭಾವನಾತ್ಮಕವಾಗಿ ಕಾಯ್ದೆ ಮಾಡಿದರು ಅದು ಫ್ಯಾಶಿಸಂ ಆಗುತ್ತದೆ. ವಯಸ್ಸಾದ ಜಾನುವಾರು ರೈತರು ಇಟ್ಟುಕೊಂಡು ಏನು ಮಾಡಬೇಕು. ಕಾನೂನಿನ ಅನ್ವಯ ಅವುಗಳನ್ನು ಗೋಶಾಲೆಯಲ್ಲಿ ಇರಿಸಬೇಕು. ಅದಕ್ಕೆ ರೈತರು ಹಣ ಕೊಡಬೇಕು ಅನ್ನುತ್ತಾರೆ. ರೈತರು ಯಾಕೆ ದುಡ್ಡು ಕೊಡಬೇಕು. ಬದಲಿಗೆ ಸರ್ಕಾರವೇ ಖರೀದಿಸಲಿ ಎಂದು ಒತ್ತಾಯಿಸಿದರು.

ಸಚಿವ ಆರ್ ಅಶೋಕ್ ಅವರಿಗೆ ನಾನೇಕೆ ರಾಸುಗಳನ್ನು ಕಳಿಸಲಿ, ರೈತರ ಹತ್ತಿರ ಹೋಗಿ ಅವರೇ ದುಡ್ಡು ಕೊಟ್ಟು ತೆಗೆದುಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಗಣಿ ಎತ್ತೋದು, ಗಂಜಲ ಗೂಡಿಸೋದು, ಮೇವು, ಬೆರಣಿ ತೆಗೆಯೋದು, ಹಾಲು ಹಾಕೋದು ರೈತರು. ವಿಧಾನಸೌಧದ ಎದುರು ನಿಲ್ಲಿಸಿಕೊಂಡು ಪೂಜೆ ಮಾಡುವ ಇವರದ್ದೇನು ಕೆಲಸ ಎಂದು ವ್ಯಂಗ್ಯವಾಡಿದರು.

ಗೋವುಗಳ ಬಗ್ಗೆ ನಿಜವಾಗಲೂ ಪ್ರೀತಿ ಇದ್ದರೆ ಕೇಂದ್ರ ಸರ್ಕಾರ ಮೊದಲು ಗೋ ಮಾಂಸ ರಫ್ತು ನಿಲ್ಲಿಸಲಿ. ದೇಶದ ಮಾಂಸ ರಫ್ತಿನಲ್ಲಿ ಶೇ 75ರಷ್ಟು ದನದ ಮಾಂಸದ ಪಾಲು ಇದೆ. ಗೋಮಾಂಸ ರಫ್ತು ಮಾಡುವ ಲಾಲ್,ಗಫೂರ್‌ಗಳು ಇವರೆಲ್ಲಾ ಬಿಜೆಪಿ ಬೆಂಬಲಿಗರೇ ಆಗಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಗೋಮಾಂಸ ರಫ್ತು ಹೆಚ್ಚಾಗಿದೆ ಎಂದು ಸ್ವತಃ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ ಎಂದರು.

ಎಸ್ಮಾ ಜಾರಿ ಸಲ್ಲ. ಸಾರಿಗೆ ನೌಕರರ ಕರೆದು ಮಾತನಾಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ಬಾಗಲಕೋಟೆ: ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರನ್ನು ಕರೆದು ಚರ್ಚಿಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಎಸ್ಮಾ ಜಾರಿಗೊಳಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ಬಾದಾಮಿಯಲ್ಲಿ ಶನಿವಾರ ಮುಷ್ಕರ ನಿರತ ಸಾರಿಗೆ ನೌಕರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಮಾತನಾಡುವೆ. ಇಂದೇ ಮಾತನಾಡುವೆ‌‌.
ಸರ್ಕಾರಕ್ಕೆ ಬುದ್ಧಿ ಇದ್ದರೆ ಕರೆದು, ಸೌಹಾರ್ದಯುತವಾಗಿ ಮಾತನಾಡಬೇಕಿತ್ತು ಎಂದರು.

'ಈಗ ನೀವು ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಂದು ಮನವಿ ಮಾಡುತ್ತಿದ್ದೀರಿ.ಆದರೆ ಸರ್ಕಾರ ಅದಕ್ಕೆ ಒಪ್ಪುತ್ತಿಲ್ಲ. ಏನಾದರೂ ಆಗಲಿ ಕರೆದು ಕೂತು ಮಾತನಾಡುವಂತೆ ಹೇಳುತ್ತೇನೆ' ಎಂದು ಭರವಸೆ ನೀಡಿದರು.

'ನೀವು ಮುಷ್ಕರ ಮಾಡಿ ಈಗಾಗಲೇ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದೀರಿ. ಇದನ್ನು ಬಹಳ ದಿನ ಮುಂದುವರೆಸಬೇಡಿ. ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ' ಎಂದು ಸಿದ್ದರಾಮಯ್ಯ ನೌಕರರಿಗೆ ಕಿವಿಮಾತು ಹೇಳಿದರು.

ಸಿದ್ದರಾಮಯ್ಯಗೂ ತಟ್ಟಿದ ಮುಷ್ಕರದ ಬಿಸಿ: ಗ್ರಾಮಪಂಚಾಯ್ತಿ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಬಾದಾಮಿ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಸಿದ್ದರಾಮಯ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಭೆ ಆಯೋಜಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಬೇಕಿದ್ದರೂ ಬಸ್‌ಗಳ ಸಂಚಾರ ಇಲ್ಲದೇ ಕಾರ್ಯಕರ್ತರು ಸಭೆಗೆ ಬಾರದೇ ಮಧ್ಯಾಹ್ನವಾದರೂ ಆರಂಭವಾಗಿರಲಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಂಪೂರ್ಣ ಸಾರಿಗೆ ನಿಂತುಹೋಗಿದೆ. ಈಗ ಏನ್ಮಾಡಬೇಕು. ಬಸ್ ಇಲ್ಲದೇ ನಮ್ಮ ಪಕ್ಷದ ಕಾರ್ಯಕರ್ತರು ಸಭೆಗೆ ಬಂದಿಲ್ಲ ಎಂದರು.

ಗೋರಕ್ಷಕರು ನ್ಯಾಯಾಂಗಕ್ಕೂ ಅತೀತರಾ?: ಅರವಿಂದ ಮಾಲಗತ್ತಿ

ಮೈಸೂರು: ‘ಗೋರಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಅಂಶ ಗೋಹತ್ಯೆ ನಿಷೇಧ ಮಸೂದೆಯಲ್ಲಿದೆ. ಹಾಗಾದರೆ, ಗೋರಕ್ಷಕರು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಗೂ ಅತೀತರಾ’ ಎಂದು ಸಾಹಿತಿ ಅರವಿಂದ ಮಾಲಗತ್ತಿ ಪ್ರಶ್ನಿಸಿದರು.

ಮೈಸೂರು ಶರಣ ಮಂಡಲಿ ವತಿಯಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ‘ಕನಕರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಅಂಶವು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮಾತ್ರವಲ್ಲ; ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನದಂತಿದೆ. ಹಾಗಿದ್ದರೆ, ಸರ್ಕಾರಕ್ಕೆ ಪೊಲೀಸರ ಮೇಲೆ ನಂಬಿಕೆ ಇಲ್ಲವೇ?’ ಎಂದು ಕೇಳಿದ ಅವರು, ಗೋರಕ್ಷಣೆಯ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸುವವರ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.