ADVERTISEMENT

ಬಾಕಿ ಬಿಲ್ ಕೊಡಿಸಲು ರೈತರ ಆಗ್ರಹ

ಸಾವರಿನ್ ಕಾರ್ಖಾನೆ ಹರಾಜಿಗೆ ಅಧಿಸೂಚನೆ: ಡಿಸಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 13:03 IST
Last Updated 27 ನವೆಂಬರ್ 2019, 13:03 IST
ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆ ಕಬ್ಬಿನ ಬಿಲ್‌ಗಾಗಿ ನೀಡಿರುವ ಚೆಕ್ ಬೌನ್ಸ್ ಆಗಿದ್ದನ್ನು ಪ್ರದರ್ಶಿಸುವ ಮೂಲಕ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು. 
ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆ ಕಬ್ಬಿನ ಬಿಲ್‌ಗಾಗಿ ನೀಡಿರುವ ಚೆಕ್ ಬೌನ್ಸ್ ಆಗಿದ್ದನ್ನು ಪ್ರದರ್ಶಿಸುವ ಮೂಲಕ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.    

ಬಾಗಲಕೋಟೆ: ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಬಾಕಿ ಹಣನೀಡುವಂತೆಆಗ್ರಹಿಸಿ ರೈತರು ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಬಂದ ಪ್ರತಿಭಟನಾಕಾರರು, ಅಲ್ಲಿ ಕಾರ್ಖಾನೆ ಮಾಲೀಕರ ಧೋರಣೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು. ಕಬ್ಬು ಕಳುಹಿಸಿದ ರೈತರಿಗೆ ಕಾರ್ಖಾನೆ ಮಾಲೀಕರು ನೀಡಿದ್ದ ಚೆಕ್ ಬೌನ್ಸ್‌ ಆಗಿದೆ. ಆದರೂ ಸಂಬಂಧಿಸಿದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿಆದಷ್ಟು ಬೇಗ ಬಾಕಿ ಇರುವ ಬಿಲ್ ಕೊಡಿಸಬೇಕು ಎಂದು ಆಗ್ರಹಿಸಿದರು.

ನಂತರ ಮುಖಂಡರಾದ ಸಿದ್ದಪ್ಪ ತಂಬೂರಿ, ಸುಭಾಸ ಬಿರಾಣಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ADVERTISEMENT

‘ಕಾರ್ಖಾನೆಗೆ ಕಬ್ಬು ಕಳಿಸಿದ ನೂರಾರು ರೈತರಿಗೆ ₹ 4 ಕೋಟಿಗೂ ಅಧಿಕ ಬಿಲ್‌ ಬಾಕಿ ಉಳಿದಿದೆ. ಈ ಹಿಂದೆ ಪ್ರತಿಭಟನೆಗೆ ಮಣಿದು ಕಾರ್ಖಾನೆ ಮಾಲೀಕರು ರೈತರಿಗೆ ಚೆಕ್ ನೀಡಿದ್ದರು. ಆದರೆ, ಅವು ಬೌನ್ಸ್‌ ಆಗಿವೆ. ಬಿಲ್‌ಗಾಗಿ ನಾವು ಪ್ರತಿದಿನ ಕಾರ್ಖಾನೆಗೆ ಅಲೆದಾಡುವಂತಾಗಿದೆ’ ಎಂದು ರೈತರು ಬೇಸರ ವ್ಯಕ್ತ ಪಡಿಸಿದರು.

‘ಈ ವರ್ಷದ ಕಬ್ಬು ಕಟಾವು ಹಂಗಾಮು ಪ್ರಾರಂಭವಾದರೂ ಕಾರ್ಖಾನೆ ಮಾತ್ರ ಕಳೆದ ವರ್ಷ ಕಳುಹಿಸಿದ ಕಬ್ಬಿಗೆ ಬಿಲ್ ನೀಡದೆ ರೈತರನ್ನು ಸತಾಯಿಸುತ್ತಿದೆ. ಜಿಲ್ಲಾಡಳಿತ ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಬಾಕಿ ಬಿಲ್ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಪ್ರವೀಣ ಕಳ್ಳೊಳ್ಳಿ, ದುಂಡಪ್ಪ ಬಿದರ್ಮಟ್ಟಿ, ಮುದಕಪ್ಪ ಕೆಂಚರಡ್ಡಿ ಸೇರಿದಂತೆ ಅನೇಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಸಾವರಿನ್ ಕಾರ್ಖಾನೆಗೆ ಕಬ್ಬು ಕಳುಹಿಸಿದ ಮಾರಾಪುರ, ಮದಭಾವಿ, ಕಾನಟ್ಟಿ, ಮುನ್ಯಾಳ, ರಂಗಾಪುರ, ಸೈದಾಪುರ, ಬೆಳಗಲಿ ಹಾಗೂ ಮಹಾಲಿಂಗಪುರದ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.