ADVERTISEMENT

ಮಹಾಲಿಂಗಪುರ: ಮಣ್ಣಿನ ಗಣಪನ ತಯಾರಿ ಜೋರು

ನಾಲ್ಕುವರೆ ದಶಕಗಳಿಂದ ಲೋಹಾರ, ಬಡಿಗೇರ ಕುಟುಂಬದಿಂದ ಮೂರ್ತಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 7:00 IST
Last Updated 31 ಆಗಸ್ಟ್ 2024, 7:00 IST
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ಮಣ್ಣಿನಿಂದ ತಯಾರಿಸಲಾಗಿರುವ ಗಣೇಶ ಮೂರ್ತಿಗಳು
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ಮಣ್ಣಿನಿಂದ ತಯಾರಿಸಲಾಗಿರುವ ಗಣೇಶ ಮೂರ್ತಿಗಳು   

ಮಹಾಲಿಂಗಪುರ: ಗಣೇಶ ಹಬ್ಬ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಮೂರ್ತಿಗಳ ನಿಷೇಧದ ಕಾರಣ ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ.

ಇಂದು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವವರು ವಿರಳರಾಗಿದ್ದಾರೆ. ಬೇರೆ ಕಡೆಯಿಂದ ಮೂರ್ತಿಗಳನ್ನು ತಂದು ಮಾರಾಟ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಈ ಮಧ್ಯೆ ರನ್ನಬೆಳಗಲಿಯಲ್ಲಿ ನಾಲ್ಕುವರೆ ದಶಕಗಳಿಂದ ಲೋಹಾರ ಹಾಗೂ ಬಡಿಗೇರ ಕುಟುಂಬದ ಸದಸ್ಯರು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವಲ್ಲಿ ಹೆಸರು ಗಳಿಸಿದ್ದಾರೆ. ಮಾನಪ್ಪ ಲೋಹಾರ ಅವರ ಮಾರ್ಗದರ್ಶನದಲ್ಲಿ ಈಗ ಅವರ ಮಗ ರಂಗನಾಥ ಮಣ್ಣಿನ ಮೂರ್ತಿ ಮಾಡುವಲ್ಲಿ ತೊಡಗಿದ್ದಾರೆ.

ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಜನರು ಒಲವು ತೋರುತ್ತಿದ್ದು, ಮುಂಗಡವಾಗಿ ಮಣ್ಣಿನ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ದೊಡ್ಡ ಗಣೇಶ ಮೂರ್ತಿಗಳ ಬದಲು ಮನೆಯಲ್ಲಿ ಇಡುವ ಮೂರ್ತಿಗಳಿಗೆ ಇವರು ಪ್ರಾಮುಖ್ಯತೆ ನೀಡಿದ್ದಾರೆ.

ADVERTISEMENT

‘ಉತ್ತಮ ಮಳೆಯಾಗುತ್ತಿದ್ದು, ಕೆರೆಕಟ್ಟೆ ಒಡಲು ತುಂಬಿದೆ. ಇದರಿಂದ ಗಣೇಶ ಮೂರ್ತಿ ತಯಾರಿಕೆಗೆ ಬೇಕಾದ ಜೇಡಿಮಣ್ಣು ತರುವುದು ಕಷ್ಟವಾಗಿದೆ. ಜೇಡಿಮಣ್ಣಿನ ದರವೂ ಹೆಚ್ಚಳವಾಗಿದೆ. ಕಳೆದ ವರ್ಷ ಒಂದು ಕೆ.ಜಿ ಜೇಡಿ ಮಣ್ಣಿಗೆ ₹ 5 ಇತ್ತು. ಈ ಬಾರಿ ₹ 6 ಆಗಿದೆ. ಅಲ್ಲದೆ, ಗುಣಮಟ್ಟದ ಮಣ್ಣು ಹುಡುಕಿ ತರಬೇಕಿದೆ. ಅದಕ್ಕಾಗಿ ಟ್ರ್ಯಾಕ್ಟರ್ ಬಾಡಿಗೆಯೂ ದುಬಾರಿಯಾಗಿದೆ. ಇದರ ಪರಿಣಾಮವಾಗಿ ಮೂರ್ತಿಗಳ ಬೆಲೆಯೂ ತುಸು ಹೆಚ್ಚಳವಾಗಿದೆ. ಒಂದು ಅಡಿಯಿಂದ ಎರಡು ಅಡಿ ಎತ್ತರದವರೆಗಿನ ಸಾವಿರಾರು ಮೂರ್ತಿಗಳು ಸಿದ್ಧವಾಗುತ್ತಿವೆ. ₹ 120ರಿಂದ ₹  1,200 ರವರೆಗೆ ದರವಿದೆ.

ರನ್ನಬೆಳಗಲಿಯಲ್ಲಿ ಸಿದ್ಧವಾದ ಗಣಪ
ರನ್ನಬೆಳಗಲಿಯಲ್ಲಿ ಮಣ್ಣಿನ ಗಣೇಶನಿಗೆ ಬಣ್ಣ ಲೇಪನ
ಸ್ಥಳೀಯವಾಗಿ ಜೇಡಿಮಣ್ಣು ಸಿಗದೇ ಇರುವುದರಿಂದ ಗೋಕಾಕ ತಾಲ್ಲೂಕಿನ ಕೊಣ್ಣೂರ ಭಾಗದಿಂದ ಮಣ್ಣು ತರಿಸಿಕೊಂಡು ಗಣೇಶ ಮೂರ್ತಿ ತಯಾರು ಮಾಡುತ್ತಿದ್ದೇವೆ
ರಂಗನಾಥ ಮಾನಪ್ಪ ಲೋಹಾರ ಮೂರ್ತಿ ತಯಾರಕ ರನ್ನಬೆಳಗಲಿ
80 ವರ್ಷ ಹಳೆಯ ಮೂರ್ತಿ
ಮಾನಪ್ಪ ಅವರ ತಂದೆ ಈರಪ್ಪ ಲೋಹಾರ ಅವರಿಗೆ ಕಲಾ ವಿದ್ಯೆ ಕಲಿಸಿದ ಮಹಾಲಿಂಗಪುರದ ರಂಗಪ್ಪ ಬಡಿಗೇರ ಅಂದಾಜು 80 ವರ್ಷಗಳ ಹಿಂದೆ ತಯಾರಿಸಿದ ಗಣೇಶ ಮೂರ್ತಿ ಈಗಲೂ ಮಿರ್ಜಿ ಗ್ರಾಮದ ಪ್ರಕಾಶ ಮುಧೋಳ ಅವರ ಮನೆಯಲ್ಲಿ ಮೂರು ತಲೆಮಾರುಗಳಿಂದಲೂ ಪೂಜಿಸಲ್ಪಡುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ರನ್ನಬೆಳಗಲಿಯ ಲೋಹಾರ ಅವರ ಮನೆಗೆ ತಂದು ಆ ಮೂರ್ತಿಗೆ ಬಣ್ಣ ಹಾಕಿಸಿಕೊಂಡು ಹೋಗುತ್ತಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.