ADVERTISEMENT

ತೇರದಾಳ: ಹಿಂದೂ–ಮುಸ್ಲಿಮರ ಭಾವೈಕ್ಯದ ಗಣಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:09 IST
Last Updated 1 ಸೆಪ್ಟೆಂಬರ್ 2025, 4:09 IST
ತೇರದಾಳದ ಬಸ್ ನಿಲ್ದಾಣದ ಬಳಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಮುಂದೆ ಆಟೊ, ವಾಹನಗಳ ಚಾಲಕರು ಹಾಗೂ ಮಾಲೀಕರು ಭಾವೈಕ್ಯದಿಂದ ಪ್ರತಿಷ್ಠಾಪಿಸಿದ ಗಣೇಶ ಉತ್ಸವದ ಅನ್ನಸಂತರ್ಪಣೆಯಲ್ಲಿ ಹಿಂದೂ-ಮುಸ್ಲಿಮರು ಪ್ರಸಾದ ಸವಿದರು
ತೇರದಾಳದ ಬಸ್ ನಿಲ್ದಾಣದ ಬಳಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಮುಂದೆ ಆಟೊ, ವಾಹನಗಳ ಚಾಲಕರು ಹಾಗೂ ಮಾಲೀಕರು ಭಾವೈಕ್ಯದಿಂದ ಪ್ರತಿಷ್ಠಾಪಿಸಿದ ಗಣೇಶ ಉತ್ಸವದ ಅನ್ನಸಂತರ್ಪಣೆಯಲ್ಲಿ ಹಿಂದೂ-ಮುಸ್ಲಿಮರು ಪ್ರಸಾದ ಸವಿದರು   

ತೇರದಾಳ: ಇಲ್ಲಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಬಳಿ ಹಿಂದೂ-ಮುಸ್ಲಿಮರು ಸೇರಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಪೂಜಿಸುವ ಗಣೇಶೋತ್ಸವ 9ನೇ ವರ್ಷಕ್ಕೆ ಕಾಲಿಟ್ಟಿದೆ.

ಕ್ರೀಡಾಂಗಣದ ಬಳಿಯ ಆಟೊ, ಕಾರು ಚಾಲಕರು ಹಾಗೂ ಮಾಲೀಕರು 2017ರಲ್ಲಿ ಕಾರ್ಯಕ್ರಮ ಆರಂಭಿಸಿದರು. ಎಲ್ಲ ಕೆಲಸಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಪ್ರತಿ ವರ್ಷ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜ ಕಾರ್ಯಕ್ಕೆ, ಭಾವೈಕ್ಯಕ್ಕೆ ಬಳಸುತ್ತಿದ್ದಾರೆ.

ಕ್ರೀಡಾಂಗಣದ ಬಳಿ ಗಿಡಗಳನ್ನು ನೆಟ್ಟಿದ್ದು, ಅವು ಬೆಳೆದು ಸಾಕಷ್ಟು ನೆರಳು ನೀಡುತ್ತಿವೆ. ಇದು ಬಸ್ ನಿಲ್ದಾಣದ ಬಳಿಯೆ ಇರುವುದರಿಂದ ಅನೇಕ ಪ್ರಯಾಣಿಕರು, ಸಾರ್ವಜನಿಕರು, ದಾರಿಹೋಕರು ಬಿಸಿಲ ಬೇಗೆಯ ಸಂದರ್ಭದಲ್ಲಿ ಇಲ್ಲಿನ ನೆರಳಿನಾಸರೆ ಪಡೆಯುತ್ತಾರೆ. ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ ಹೊರಟವರಿಗೆ ವಿವಿಧ ತಿಂಡಿ ಪದಾರ್ಥ ವಿತರಿಸುತ್ತಾರೆ. ಬಸವೇಶ್ವರ ಮೂರ್ತಿಯ ಸುತ್ತಲೂ ಸ್ವಚ್ಛತೆ ಕಾಪಾಡುವುದು, ಹೆದ್ದಾರಿಯ ಗುಂಡಿಗಳನ್ನು ಮುಚ್ಚುವುದು ಹೀಗೆ ಹಲವು ಸಾಮಾಜಿಕ ಕಾರ್ಯಗಳನ್ನೂ ಈ ಗುಂಪು ಮಾಡುತ್ತಿದೆ.

ADVERTISEMENT

‘ಸಾರ್ವಜನಿಕ ಸೇವೆಗಿಳಿದಿರುವ ನಮ್ಮಲ್ಲಿ ಧರ್ಮ–ಜಾತಿ ಭೇದವಿಲ್ಲ. ಇನ್ನಷ್ಟು ಸಾರ್ವಜನಿಕ ಉಪಯೋಗಿ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದೇವೆ. ಗಣೇಶ ಉತ್ಸವದ ಮೂಲಕ ಸಾಕಾರಗೊಳ್ಳುತ್ತಿದೆ’ ಎನ್ನುತ್ತಾರೆ ಚಾಲಕರಲ್ಲಿ ಒಬ್ಬರಾದ ರಿಯಾಜ ಸಂಗತ್ರಾಸ.

ಈ ವರ್ಷದ ಗಣೇಶೋತ್ಸವ ಆಚರಣೆಯಲ್ಲಿ ಶನಿವಾರ ಸಿರಾ, ಬುಂದಿ, ಬದನೆಕಾಯಿ ಪಲ್ಯ, ಅನ್ನ, ಸಾರು ಅನ್ನಸಂತರ್ಪಣೆಯಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು. ಪ್ರಭು ಹೂಗಾರ, ವಿದ್ಯಾನಂದ ಧರೆನ್ನವರ, ಭಾಷಾ ಕೊರಬು, ಶಂಕರ ಕಮಲದಿನ್ನಿ, ಮಜಬೂರ ಪಕಾಲಿ, ಮಹೇಶ ಮುದಕನ್ನವರ, ನಜೀರ ಜಮಾದಾರ, ಶ್ರೀಶೈಲ ಪಾಟೀಲ, ಅಲ್ಲಾಭಕ್ಷ ಕೊರಬು, ಲಕ್ಕಪ್ಪ ದೇಸಾಯಿ, ಶಿವಾನಂದ ನಡುವಿನಕೇರಿ, ಶ್ರೀಶೈಲ ಮಲಾಬದಿ, ನಾಸೀರ ನಾಯಕವಾಡಿ, ಪ್ರಕಾಶ ಕಾಲತಿಪ್ಪಿ, ಮುತ್ತು ಹಾಡಕರ, ಶಿವಾನಂದ ಸಿದ್ದಾಪುರ, ಮಂಜನಾಥ ಯಳಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.