ADVERTISEMENT

ಘಟಪ್ರಭಾ, ಮಲಪ್ರಭಾ, ಕೃಷ್ಣೆಯ ಅಬ್ಬರ: ಬಾಗಲಕೋಟೆ ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 7:57 IST
Last Updated 25 ಜುಲೈ 2021, 7:57 IST
ಬಾದಾಮಿ ತಾಲ್ಲೂಕಿನ ಎಸ್.ಕೆ.ಆಲೂರಿನ ಗ್ರಾಮ ಪಂಚಾಯ್ತಿ ಕಾರ್ಯಾಲಯ ಮಲಪ್ರಭಾ ನದಿ ಪ್ರವಾಹದ ನೀರಿನಿಂದ ಆವೃತವಾಗಿದೆ.
ಬಾದಾಮಿ ತಾಲ್ಲೂಕಿನ ಎಸ್.ಕೆ.ಆಲೂರಿನ ಗ್ರಾಮ ಪಂಚಾಯ್ತಿ ಕಾರ್ಯಾಲಯ ಮಲಪ್ರಭಾ ನದಿ ಪ್ರವಾಹದ ನೀರಿನಿಂದ ಆವೃತವಾಗಿದೆ.   

ಬಾಗಲಕೋಟೆ : ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆದರೂ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಿಂದ ನೀರು ಹರಿಯಬಿಟ್ಟಿರುವುದರಿಂದ ಜಿಲ್ಲೆಯಲ್ಲಿ ಭಾನುವಾರವೂ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ.

ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 18 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ.

ಘಟಪ್ರಭಾ ನದಿಯ ಅಬ್ಬರಕ್ಕೆ ಸಿಲುಕಿ ಮುಧೋಳ ತಾಲ್ಲೂಕಿನ ನಂದಗಾಂವ ಗ್ರಾಮ ನಡುಗಡ್ಡೆಯಾಗಿ ಬದಲಾಗಿದೆ. ನಂದಗಾಂವ ಹಾಗೂ ಸುತ್ತಲಿನ ತೋಟಗಳಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದ 55 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಎಂಟು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿವೆ.

ADVERTISEMENT

ಪಕ್ಕದ ಮಿರ್ಜಿ ಹಾಗೂ ಒಂಟಗೋಡಿ ಗ್ರಾಮಗಳಿಗೆ ಭಾನುವಾರ ಘಟಪ್ರಭಾ ನದಿಯ ಪ್ರವಾಹದ ನೀರು ನುಗ್ಗಿದೆ. ಅಲ್ಲಿನ ಜನವಸತಿ ಸಂಪೂರ್ಣ ಜಲಾವೃತವಾಗಿದೆ. ಗ್ರಾಮಸ್ಥರನ್ನು ಸಮೀಪದ ಶಾಲೆಯಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಚನಾಳದಲ್ಲೂ ಘಟಪ್ರಭೆಯ ಆರ್ಭಟಕ್ಕೆ ನದಿ ತಟದ ನೂರಾರು ಎಕರೆ ಹೊಲಗಳಲ್ಲಿ ಬೆಳೆದ ಕಬ್ಬು, ಗೋವಿನ ಜೋಳ ಜಲಾವೃತವಾಗಿವೆ.ಮಿರ್ಜಿಯಲ್ಲಿ ಜನವಸತಿಗೆ ನೀರು ನುಗ್ಗಿದ್ದು, ನದಿ ದಂಡೆಯಲ್ಲಿ ವಾಸವಿದ್ದ 10ಕ್ಕೂ ಹೆಚ್ಚು ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

ಮಲಪ್ರಭೆಯ ಆಟಾಟೋಪಕ್ಕೆ ಬಾದಾಮಿ ತಾಲ್ಲೂಕಿನ ತಳಕವಾಡ, ಎಸ್.ಕೆ.ಆಲೂರು ಹಾಗೂ ಹಾಗನೂರಿನಲ್ಲಿ ಹೊಲಗಳಲ್ಲಿ ಬೆಳೆದುನಿಂತ ಪೈರು ಹಾನಿಗೀಡಾಗಿದೆ.

ತಳಕವಾಡದ ವೀರಭದ್ರೇಶ್ವರ ಗುಡಿ, ಎಸ್.ಕೆ.ಆಲೂರಿನಲ್ಲಿ ಶಾಲಾ ಕಟ್ಟಡದಲ್ಲಿ ನಡೆಯುತ್ತಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಜಲಾವೃತವಾಗಿವೆ. ತಳೇವಾಡ ರಲ್ಲಿ ಜನವಸತಿಗೂ ನೀರು ನುಗ್ಗಿದ್ದು, ಕಳೆದ ವರ್ಷ ಕಟ್ಟಿಸಿಕೊಟ್ಟಿದ್ದ ಆಸರೆ ಮನೆಗಳಿಗೆ ನಿವಾಸಿಗಳನ್ನು ಕಳುಹಿಸಲಾಗಿದೆ.

ಬಾದಾಮಿ ತಾಲ್ಲೂಕಿನ ತಳಕವಾಡದಲ್ಕಿ ವೀರಭದ್ರೇಶ್ವರ ದೇವಸ್ಥಾನ ಜಲಾವೃತವಾಗಿದೆ.

ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಹಾಗೂ ಗದಗ ಜಿಲ್ಲೆ ಕೊಣ್ಣೂರು ನಡುವಿನ ಹಳೆಯ ಸೇತುವೆ ಮುಳುಗಡೆ ಆಗಿದೆ.

ಜಿಲ್ಲೆಯ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಭಾನುವಾರ ಹೆಚ್ಚಳವಾಗಿದೆ. ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ 3.20 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 3.19 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.