ADVERTISEMENT

ತುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ನಂದಗಾಂವ ಗ್ರಾಮಕ್ಕೆ ನಡುಗಡ್ಡೆಯಾಗುವ ಭೀತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 3:20 IST
Last Updated 21 ಆಗಸ್ಟ್ 2025, 3:20 IST
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ಘಟಪ್ರಭಾ ನದಿ ನೀರು ಆವರಿಸಿರುವುದು 
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ಘಟಪ್ರಭಾ ನದಿ ನೀರು ಆವರಿಸಿರುವುದು    

ಮಹಾಲಿಂಗಪುರ: ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಸಮೀಪದ ನಂದಗಾಂವ ಗ್ರಾಮಕ್ಕೆ ನಡುಗಡ್ಡೆಯಾಗುವ ಭೀತಿ ಆವರಿಸಿದೆ.

ಹಳೇ ನಂದಗಾಂವ ಗ್ರಾಮದಲ್ಲಿ 49 ಕುಟುಂಬಗಳಿದ್ದು, ಈ ಪೈಕಿ 15 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರವಾಗಿವೆ. ಘಟಪ್ರಭಾ ನದಿ ಪ್ರವಾಹ ಹೆಚ್ಚಿದ್ದು, ನಂದಗಾಂವ ಗ್ರಾಮವನ್ನು ನದಿ ನೀರು ಸುತ್ತುವರಿಯಲಿದೆ.

‘ಪ್ರವಾಹ ಎದುರಿಸಲು ತಾಲ್ಲೂಕು ಆಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೊಸ ನಂದಗಾಂವದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಗತ್ಯ ಬಿದ್ದರೆ ಸುರಕ್ಷಿತವಾಗಿ ಕುಟುಂಬಗಳನ್ನು ಹಾಗೂ ಜಾನುವಾರನ್ನು ಸ್ಥಳಾಂತರಿಸಲಾಗುವುದು’ ಎಂದು ತಹಶೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.

ADVERTISEMENT

ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಢವಳೇಶ್ವರ ಸೇತುವೆ, ನಂದಗಾಂವ-ಅವರಾದಿ ಹಾಗೂ ಮಿರ್ಜಿ-ಅಕ್ಕಿಮರಡಿ ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸುತ್ತಮುತ್ತಲಿನ ಗ್ರಾಮಗಳ ರೈತರ ಸಾವಿರಾರು ಎಕರೆ ಕಬ್ಬಿನ ಗದ್ದೆಗಳಲ್ಲಿ ನೀರು ಹರಿಯುತ್ತಿದೆ.

ಮಹಾರಾಷ್ಟ್ರದಲ್ಲಿನ ಮಳೆಯ ಪರಿಣಾಮ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದೆ. ಜತೆಗೆ ಹಿಡಕಲ್ ಜಲಾಶಯದಿಂದಲೂ ನೀರು ಬಿಟ್ಟಿರುವ ಕಾರಣ ಗೋಕಾಕ ಹತ್ತಿರದ ಧುಪದಾಳ ಜಲಾಶಯ ಮಾರ್ಗವಾಗಿ 53,810 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದೆ. ಬಳ್ಳಾರಿ ನಾಲಾ 2,477 ಕ್ಯುಸೆಕ್, ಮಾರ್ಕಂಡೇಯ ಜಲಾಶಯದಿಂದ 5,957 ಕ್ಯೂಸೆಕ್ ನೀರು ಸೇರಿದಂತೆ ಘಟಪ್ರಭಾ ನದಿಗೆ ಒಟ್ಟು 63 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.