ADVERTISEMENT

ದಾಸರಟ್ಟಿ: ಸರ್ಕಾರಿ ಶಾಲೆಯ ಮೇಲ್ಛಾವಣಿ ಶಿಥಿಲ

ಬೀಳುತ್ತಿರುವ ಶಾಲೆ ಚಾವಣಿ ಪದರು, ಮಕ್ಕಳ ಹಾಜರಾತಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:06 IST
Last Updated 25 ಜುಲೈ 2024, 5:06 IST
ತೇರದಾಳದ ದಾಸರಟ್ಟಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಮೇಲ್ಚಾವಣಿ ಸೋರುತ್ತಿರುವುದು 
ತೇರದಾಳದ ದಾಸರಟ್ಟಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಮೇಲ್ಚಾವಣಿ ಸೋರುತ್ತಿರುವುದು    

ತೇರದಾಳ: ನಿರಂತರ ಮಳೆಯಿಂದಾಗಿ ಇಲ್ಲಿನ ದಾಸರಟ್ಟಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಮೇಲ್ಛಾವಣಿ ಪದರು ಬೀಳುತ್ತಿದ್ದು, ಭಯದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಕೆಲ ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. 

ಈ ಶಾಲೆಯಲ್ಲಿ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಇಲ್ಲಿ 1ರಿಂದ 5ನೇ ತರಗತಿಯವರೆಗೆ 102 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಂದು ಕೊಠಡಿಯಾದರೂ ಸರಿಯಿದ್ದರೆ ಅಲ್ಲಿ ಪಾಠ-ಪ್ರವಚನಗಳನ್ನು ನಡೆಸಬಹುದು.

ಇಲ್ಲವೆ ಮಳೆಗಾಲದಲ್ಲಿ ಅಲ್ಲಿ ಮಕ್ಕಳನ್ನು ಕುಳಿತುಕೊಳ್ಳಲು ಶಾಲಾ ದಾಖಲಾತಿಗಳನ್ನು ಸುರಕ್ಷಿತವಾಗಿಡಬಹುದು ಅಲ್ಲಿ ಇರುವ ಮೂರು ಕೊಠಡಿಗಳ ಸ್ಥಿತಿ ಹೀಗಿರುವಾಗ ಮಕ್ಕಳು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಮಳೆ ಇಲ್ಲದ ಸಂದರ್ಭದಲ್ಲಿ ಮೈದಾನದಲ್ಲಿ ಪಾಠ ಬೋಧನೆ ನಡೆಯುತ್ತಿದೆ. ಇದರಿಂದ ರೋಸಿ ಹೋದ ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಶಿಥಿಲಾವಸ್ಥೆ ತಲುಪಿರುವ ಮೂರು ಕೊಠಡಿಗಳನ್ನು ನೆಲಸಮಗೊಳಿಸಿ ನೂತನ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ.

ಕೆಲ ದಿನಗಳ ಹಿಂದಷ್ಟೇ ಶಾಲೆಯ ಸಮೀಪವೇ ವಿದ್ಯುತ್ ತಂತಿ ಹರಿದು ಬಿದ್ದು ಇಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಅಲ್ಲಿ ಹೆಸ್ಕಾಂ ನಿರ್ಲಕ್ಷ್ಯ ಕಾರಣವಾಗಿತ್ತು. ಈಗ ಈ ಶಾಲೆಯ ಮೇಲ್ಛಾವಣಿ ಉದುರಿ ಬೀಳುವ ಮೂಲಕ ಮಕ್ಕಳ ಪ್ರಾಣಕ್ಕೆ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂಬುದು ಪಾಲಕರ ಪ್ರಶ್ನೆಯಾಗಿದೆ.

ಶಾಲಾ ಕೊಠಡಿ ಮೇಲ್ಛಾವಣಿ ಉದುರಿ ಬೀಳುತ್ತಿದ್ದು ಹಾಗೂ ಮಳೆಯಾದಾಗ ಸೋರುತ್ತಿರುವುದರಿಂದ ಕೆಲವು ಪಾಲಕರು ಹೆದರಿ ಮಕ್ಕಳನ್ನು ಶಾಲೆ ಕಳುಹಿಸುತ್ತಿಲ್ಲ. ಶಿಕ್ಷಣ ಇಲಾಖೆ ಬೇಗ ಕ್ರಮ ಕೈಗೊಳ್ಳಲಿ ಎಂದು ಯುವ ಮುಖಂಡ ಸಂತೋಷ ಅಕ್ಕೆನ್ನವರ ತಿಳಿಸಿದರು.

ಯಾವುದಾದರು ಅವಘಡ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಂಡು ಈತ್ತ ಗಮನ ಹರಿಸಲಿ ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ. 

‘ಶಾಲಾ ಕೊಠಡಿ ಸೋರುತ್ತಿರುವ ವಿಷಯ ಗಮನಕ್ಕೆ ಬಂದಿದ್ದರಿಂದ ಅಲ್ಲಿನ ಶಾಲೆಗೆ ರಜೆ ನೀಡಲು ಅಲ್ಲಿನ ಶಿಕ್ಷಕರಿಗೆ ಮೌಖಿಕವಾಗಿ ತಿಳಿಸಲಾಗಿದ್ದು, ಉಳಿದಂತೆ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು' ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶಾಲಾ ಕೊಠಡಿ ಚಾವಣಿ ಉದುರಿ ಬೀಳುತ್ತಿದ್ದು, ಮಳೆ ಬಂದಾಗ ಸೋರುತ್ತಿರುವುದ ರಿಂದ ಕೆಲವು ಪಾಲಕರು ಹೆದರಿ ಮಕ್ಕಳನ್ನು ಶಾಲೆ ಕಳುಹಿಸುತ್ತಿಲ್ಲ. ಶಿಕ್ಷಣ ಇಲಾಖೆ ಬೇಗ ಕ್ರಮ ಕೈಗೊಳ್ಳಲಿ
ಸಂತೋಷ ಅಕ್ಕೆನ್ನವರ, ಯುವ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.