ADVERTISEMENT

17ನೇ ದಿನ ಪೂರೈಸಿದ ಮುಷ್ಕರ: ಬೇಡಿಕೆಗೆ ಸರ್ಕಾರ ಸ್ಪಂದಿಸಲಿ- ಸುಶೀಲಕುಮಾರ ಬೆಳಗಲಿ

ಖಾಸಗಿ ಶಾಲೆ ಒಕ್ಕೂಟ ಸದಸ್ಯರ ಬೆಂಬಲ

​ಪ್ರಜಾವಾಣಿ ವಾರ್ತೆ
Published 1 ಮೇ 2022, 2:55 IST
Last Updated 1 ಮೇ 2022, 2:55 IST
ಮಹಾಲಿಂಗಪುರದಲ್ಲಿ ನಡೆದ ಮುಷ್ಕರದಲ್ಲಿ ಸುಶೀಲಕುಮಾರ ಬೆಳಗಲಿ ಮಾತನಾಡಿದರು
ಮಹಾಲಿಂಗಪುರದಲ್ಲಿ ನಡೆದ ಮುಷ್ಕರದಲ್ಲಿ ಸುಶೀಲಕುಮಾರ ಬೆಳಗಲಿ ಮಾತನಾಡಿದರು   

ಮಹಾಲಿಂಗಪುರ: ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಭೌಗೋಳಿಕ ದೃಷ್ಟಿ ಇಟ್ಟುಕೊಂಡು ತಾಲ್ಲೂಕು ರಚನೆ ಮಾಡಿಲ್ಲ. ತಮಗೆ ಎಲ್ಲಿ ಅನುಕೂಲವಿದೆಯೋ ಅಲ್ಲಿ ತಾಲ್ಲೂಕು ರಚನೆ ಮಾಡಲಾಗಿದೆ. ಅದಕ್ಕೊಂದು ಬದ್ಧತೆಯಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಆರೋಪಿಸಿದರು.

ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮಹಾಲಿಂಗಪುರ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಮುಷ್ಕರದ 17ನೇ ದಿನವಾದ ಶನಿವಾರ ಮಾತನಾಡಿದರು. ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ತಾಲ್ಲೂಕು ರಚನೆಯಿಂದ ಸರ್ಕಾರಕ್ಕೆ ಹೊರೆಯಾಗಬಹುದು, ಆದರೆ ಜನರಿಗೆ ಉಪಯೋಗವಿದೆ. ಅಲ್ಲದೆ, ಸರ್ಕಾರಕ್ಕೂ ಅನುಕೂಲವಿದೆ. ದೊಡ್ಡ ಪಟ್ಟಣವಾಗಿರುವ ಮಹಾಲಿಂಗಪುರ ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹವಾಗಿದೆ ಎಂದರು.

ಬೇಡಿಕೆ ಈಡೇರಿಕೆಗೆ ಶಾಂತರೀತಿಯಿಂದ ಜನರು ಹೋರಾಟ ಮಾಡುತ್ತಿದ್ದಾರೆ. ಅವರು ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಸರ್ಕಾರ ಮಾಡದೇ ಬೇಡಿಕೆಗಳಿಗೆ ತಕ್ಷಣ ಸ್ಪಂದನೆ ಮಾಡಬೇಕು. ಈ ಹೋರಾಟ ನಿರಂತರವಾಗಿದ್ದರೆ ಬೇಡಿಕೆ ಖಂಡಿತವಾಗಿಯೂ ಈಡೇರುತ್ತದೆ ಎಂದರು.

ADVERTISEMENT

ಸಂಗಪ್ಪ ಹಲ್ಲಿ ಮಾತನಾಡಿ, ಜನಸಂಖ್ಯೆ, ಕೃಷಿ, ಉದ್ದಿಮೆ, ನೇಕಾರಿಕೆ, ವ್ಯಾಪಾರ ಹಾಗೂ ಭೌಗೋಳಿಕ ಅರ್ಹತೆ ಆಧರಿಸಿ ಮಹಾಲಿಂಗಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದಪ್ಪ ಶಿರೋಳ, ರಾಜು ತೇರದಾಳ, ಮಲ್ಲಯ್ಯ ಹಿರೇಮಠ, ರಾಜೇಂದ್ರ ಮಿರ್ಜಿ, ಶಿವಲಿಂಗ ಟಿರಕಿ, ಹಣಮಂತ ಜಮಾದಾರ ಮಾತನಾಡಿದರು.

ಖಾಸಗಿ ಶಾಲೆ ಬೆಂಬಲ: ಮುಷ್ಕರಕ್ಕೆ ಖಾಸಗಿ ಶಾಲೆ ಆಡಳಿತ ಮಂಡಳಿ, ಶಿಕ್ಷಕರು ಬೆಂಬಲ ವ್ಯಕ್ತಪಡಿಸಿದರು. ಎಂ.ಎಸ್.ತೆಗ್ಗಿನಮಠ, ವಿಠ್ಠಲ ಸಂಶಿ, ಎಂ.ಐ.ಡಾಂಗೆ, ಎಂ.ವೈ.ಕುಳಲಿ, ಎಸ್.ಎಂ.ತೆಗ್ಗಿನಮಠ, ಸಂಗಮೇಶ ಹಿರೇಮಠ, ಜ್ಯೋತೆಪ್ಪ ಕಪರಟ್ಟಿ, ಎಸ್.ಕೆ.ಹಿರೇಮಠ, ಎಸ್.ಜಿ.ಹಿರೇಮಠ, ಆನಂದ ತಮದಡ್ಡಿ, ಎಸ್.ಎಸ್.ಚೌಗಲೆ, ಮಹಾಂತೇಶ ಬುರಕುಲೆ, ವಿನೋದ ವಜ್ಜರಮಟ್ಟಿ, ಎಚ್.ಬಿ.ಕೌಜಲಗಿ, ಎಸ್.ಎಸ್.ಮೆಟಗುಡ್ಡ, ಜಿ.ಕೆ.ಪೂಜೇರಿ, ವಿ.ಆರ್.ಬೀರನಗಡ್ಡಿ, ಎಸ್.ಬಿ.ಕರೆನ್ನವರ, ಮಲ್ಲಪ್ಪ ದಳವಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.