ADVERTISEMENT

ಕುರಿ-ಮೇಕೆ ಸತ್ತರೆ ಪರಿಹಾರ ಯೋಜನೆಗೆ ಅನುದಾನ ಕೊಡಿ: ಸರ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 6:48 IST
Last Updated 24 ನವೆಂಬರ್ 2020, 6:48 IST

ಬಾಗಲಕೋಟೆ: ರೋಗಬಾಧೆ ಹಾಗೂ ಆಕಸ್ಮಿಕ ಅವಘಡಗಳಿಗೆ ಸಿಲುಕಿ ಕುರಿ-ಮೇಕೆಗಳು ಸತ್ತರೆ ಪರಿಹಾರ ನೀಡುವ ಯೋಜನೆಯನ್ನು ಈ ಮೊದಲಿನಂತೆ ಮುಂದುವರೆಸಲು ಜಿಲ್ಲೆಯ ಕುರಿಗಾರ ಸಮುದಾಯದ ಮುಖಂಡರಾದ ಭೀಮಶಿ ಮೊಕಾಶಿ ಹಾಗೂ ಬಿ.ಎಸ್. ಕೆಂಗಾರು ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಸ್ಮಿಕವಾಗಿ ಸಾವಿಗೀಡಾದ ಮೂರು ತಿಂಗಳ ಒಳಗಿನ ಕುರಿ-ಮೇಕೆಗಳಿಗೆ ₹ 2,500 ಹಾಗೂ ಆರು ತಿಂಗಳು ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕುರಿ-ಮೇಕೆಗಳಿಗೆ ₹ 5,000 ಪರಿಹಾರ ಧನವನ್ನು ಕುರಿಗಾರರಿಗೆ ನೀಡುವ ಯೋಜನೆಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗದೇ ಯೋಜನೆ ಸ್ಥಗಿತಗೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಕುರಿಗಾರರಿಗೆ ಆರ್ಥಿಕ ನೆರವು ಹಾಗೂ ಮಾರ್ಗದರ್ಶನ ನೀಡಲು, ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸಲು ಸ್ಥಾಪಿಸಲಾದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಕೂಡ ಸರ್ಕಾರದಿಂದ ಸೂಕ್ತ ಅನುದಾನ ಸಿಗದೇ ನಿಷ್ಕ್ರಿಯವಾಗಿವೆ. ಎರಡೂ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿ ಎಂಬುದು ರಾಜ್ಯದ ಎಲ್ಲ ಕುರಿಗಾರರ ಒತ್ತಾಸೆಯಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕುರಿಗಾರರಿಗೆ ಸ್ವಂತ ಜಮೀನು ಇಲ್ಲ. ಹೀಗಾಗಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ಮಾಡಿಕೊಡಬೇಕು. ಮೀನುಗಾರರ ರೀತಿ ಕುರಿಗಾರರಿಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು ಎಂದು ಕೋರಿದರು.

ಕುರಿ ಮತ್ತು ಮೇಕೆಗಳಿಗೆ ಈ ಮೊದಲು ಜಂತು ನಾಶಕ ಔಷಧಿಗಳನ್ನು ಕುರಿಗಾರರ ಸಂಘಗಳಿಂದ ನೀಡಲಾಗುತ್ತಿತ್ತು. ಈಗ ಅದನ್ನು ಪಶುವೈದ್ಯ ಇಲಾಖೆಯ ಆಸ್ಪತ್ರೆಗಳ ಮೂಲಕ ನೀಡಲಾಗುತ್ತಿದೆ. ಆದರೆ ಅವು ಸರಿಯಾಗಿ ಕುರಿಗಾರರನ್ನು ತಲುಪುತ್ತಿಲ್ಲ. ಮೊದಲಿನಂತೆ ಕುರಿಗಾರರ ಸಹಕಾರ ಸಂಘಗಳ ಮೂಲಕವೇ ಔಷಧ ವಿತರಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.