ADVERTISEMENT

ಗುಳೇದಗುಡ್ಡ | 25ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:17 IST
Last Updated 17 ಫೆಬ್ರುವರಿ 2026, 6:17 IST
ಗುಳೇದಗುಡ್ಡದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿಧಾಮದಲ್ಲಿ (ಸ್ಮಶಾನ) 25 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆಯನ್ನು ಭಾನುವಾರ ರಾತ್ರಿ ಗಣ್ಯರು ಲೋಕಾರ್ಪಣೆಗೊಳಿಸಿದರು 
ಗುಳೇದಗುಡ್ಡದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿಧಾಮದಲ್ಲಿ (ಸ್ಮಶಾನ) 25 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆಯನ್ನು ಭಾನುವಾರ ರಾತ್ರಿ ಗಣ್ಯರು ಲೋಕಾರ್ಪಣೆಗೊಳಿಸಿದರು    

ಗುಳೇದಗುಡ್ಡ: ಸ್ಮಶಾನವೆಂದರೇ ಭಯಪಡುವ ಇಂದಿನ ದಿನಮಾನದಲ್ಲಿ ಶಿವರಾತ್ರಿ ಹಬ್ಬದ ನಿಮಿತ್ತ ಶಿವನ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆಯ ನೆಪದಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಒಂದು ವಿನೂತನ ಮತ್ತು ಮೌಢ್ಯತೆಯ ವಿರುದ್ಧ ಸಂದೇಶ ಸಾರುವ ಕಾರ್ಯಕ್ರಮ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ಪಟ್ಟಣದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿಧಾಮದಲ್ಲಿ (ಸ್ಮಶಾನ) ನಿರ್ಮಾಣಗೊಂಡ 25 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆಯನ್ನು ಭಾನುವಾರ ರಾತ್ರಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸ್ಮಶಾನದ ಗೇಟ್ ಹತ್ತಿರ ಬಂದರೆ ಭಯಪಡುವ ಇಂದಿನ ದಿನಗಳಲ್ಲಿ ತಾವು ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದ್ದು ಉತ್ತಮ ಬೆಳವಣಿಗೆ. ನನಗೆ ಎರಡು ವಿಷಯ ಅನುಭವಕ್ಕೆ ಬರುತ್ತವೆ. ಒಂದು ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುವುದು. ಅದು ಮೌಢ್ಯದ ವಿರುದ್ಧ ಸಂದೇಶ ರವಾನೆ ಮಾಡಿದ್ದು, ಮತ್ತೊಂದು ನಾವೆಲ್ಲರೂ ಒಂದು ದಿನ ಈ ಸ್ಥಳಕ್ಕೆ ಬರಲೇಬೇಕು. ಹೀಗಾಗಿ ಇರುವಾಗಲೇ ಎಲ್ಲರೊಂದಿಗೆ ಬೆರೆತು ಬಾಳಬೇಕೆಂಬ ಅರಿವು ಮೂಡುತ್ತದೆ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಗುರುಸಿದ್ದೇಶ್ವರ ಮಠದ ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ಸ್ಮಶಾನದಲ್ಲಿ ಶಿವನ ಮೂರ್ತಿ ನಿರ್ಮಿಸಿರುವುದು ಉತ್ತಮವಾದ ಬೆಳವಣಿಗೆ. ಬೇರೆ ಊರುಗಳ ಸ್ಮಶಾನಗಳಿಗೆ ಇಲ್ಲಿನ ಸ್ಮಶಾನ ಹೋಲಿಕೆ ಮಾಡಿದರೆ ತುಂಬಾ ವಿಭಿನ್ನ ಅನಿಸುತ್ತದೆ. ಸುತ್ತಲೂ ಗಿಡಗಳು, ಹಕ್ಕಿಗಳ ಕಲರವ, ನೀರಿನ ವ್ಯವಸ್ಥೆ, ಶಿವನ ಪ್ರತಿಮೆ ಇವುಗಳೆಲ್ಲ ಮನಸ್ಸಿಗೆ ನೆಮ್ಮದಿ, ಪ್ರಶಾಂತತೆ ನೀಡುತ್ತವೆ. ಸ್ಮಶಾನದಲ್ಲಿ ಯಾರು ಮಣ್ಣಾಗುತ್ತಾರೋ ಅವರೇ ಪುಣ್ಯವಂತರು. ಸ್ಮಶಾನ ಎಂದರೆ ಭಯ ಬರುತ್ತಿತ್ತು. ಆದರೆ ಈ ಸ್ಮಶಾನ ಭಯ ತರಿಸುವುದಿಲ್ಲ. ಸುತ್ತಲೂ ಮನೆಗಳಿದ್ದೂ ಎಲ್ಲರೂ ನಿರ್ಭಯದಿಂದ ಬದುಕುತ್ತಿದ್ದಾರೆ. ಇದು ಉಳಿದೆಲ್ಲ ಊರುಗಳಿಗೆ ಮಾದರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಮಶಾನ ಅಭಿವೃದ್ಧಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಶಾಸಕರು ಸನ್ಮಾನ ಮಾಡಿದರು. ಸ್ಮಶಾನ ನಿರ್ವಹಣೆ ಮಾಡುವ ಸಿಬ್ಬಂದಿಗೆ ಅಧಿಕೃತವಾದ ನೇಮಕಾತಿ ಆದೇಶಪತ್ರವನ್ನು ಶಾಸಕರು ನೀಡಿದರು.

ವೇದಿಕೆ ಮೇಲೆ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ, ಗ್ಯಾರಂಟಿ ಅನುಷ್ಠಾನ ಯೋಜನೆಯ ತಾಲ್ಲೂಕು ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಶಿವನಯ್ಯ ಮಳಿಮಠ, ಚಿದಾನಂದ ಕಾಟವಾ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ವಿಷ್ಣು ಬಳಿಗೇರ, ಶ್ರೀಕಾಂತ ಧಾರವಾಡ, ಪುರಸಭೆ ಸಿಬ್ಬಂದಿ, ಮಹಿಳೆಯರು, ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.