ADVERTISEMENT

ಹಾವೇರಿ, ಮುಧೋಳ: ಕಬ್ಬು ಬೆಳೆಗಾರರ ಹೋರಾಟ ತೀವ್ರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 23:43 IST
Last Updated 11 ನವೆಂಬರ್ 2025, 23:43 IST
<div class="paragraphs"><p>ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಮುಧೋಳ ಸಮೀಪದ ಮಹಾಲಿಂಗಪುರ ಬೈಪಾಸ್ ಬಳಿ ಕೆಳಗಡೆ ಉರುಳಿಸಿರುವುದು</p></div>

ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಮುಧೋಳ ಸಮೀಪದ ಮಹಾಲಿಂಗಪುರ ಬೈಪಾಸ್ ಬಳಿ ಕೆಳಗಡೆ ಉರುಳಿಸಿರುವುದು

   

ಹಾವೇರಿ/ಮುಧೋಳ: ಟನ್‌ ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ದರ ನೀಡಲು ಒತ್ತಾಯಿಸಿ ಹಾವೇರಿಯಲ್ಲಿ ನಡೆದಿರುವ ಅಹೋರಾತ್ರಿ ಧರಣಿ ಮತ್ತು ಪ್ರತಿ ಟನ್ ಕಬ್ಬಿಗೆ ₹ 3,500 ದರ ನಿಗದಿಪಡಿಸುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿರುವ ಪ್ರತಿಭಟನೆ ಮಂಗಳವಾರವೂ ಮುಂದುವರೆಯಿತು.

‘ಹಾವೇರಿ ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ. ಟನ್‌ ಕಬ್ಬಿಗೆ ₹ 2,711 ರಿಂದ ₹2,740ರವರೆಗೆ ದರ ನಿಗದಿಪಡಿಸುವುದಾಗಿ ಕಾರ್ಖಾನೆಯವರು ಹೇಳುತ್ತಾರೆ. ಆದರೆ, ನಾವು ಒಪ್ಪುವುದಿಲ್ಲ. ಟನ್‌ ಕಬ್ಬಿಗೆ ₹ 3,300 ದರ ನಿಗದಿಪಡಿಸುವವರಗೆ ಧರಣಿ ಹಿಂಪಡೆಯಲ್ಲ’ ಎಂದು ರೈತರು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಬಂದು ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನಕಾರರು ಒಪ್ಪಲಿಲ್ಲ.

ADVERTISEMENT

‘ಬೆಳಗಾವಿ ರೈತರಿಗೆ ನೀಡಿರುವ ಬೆಲೆಯನ್ನು ಹಾವೇರಿ ಜಿಲ್ಲೆಯ ರೈತರಿಗೆ ನೀಡುವವರೆಗೂ ಧರಣಿ ನಡೆಸುತ್ತೇವೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ತಿಳಿಸಿದರು.

ಮುಧೋಳದಲ್ಲಿ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಸರ್ಕಾರವು ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡುವವರೆಗೆ ಹೋರಾಟ ಮುಂದುವರೆಯಲಿದೆ. 2013ರಲ್ಲಿ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹350 ಪ್ರೋತ್ಸಾಹ ಧನ ಘೋಷಿಸಿತ್ತು. ಈಗಲೂ ಅಂತಹದೇ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ರೈತರು ಕಾರ್ಖಾನೆಗಳಿಗೆ ಕಬ್ಬು  ಪೂರೈಸಿದರೆ  ನುರಿಸುತ್ತೇವೆ. ಇಲ್ಲದಿದ್ದರೆ, ಬಂದ್ ಇರಲಿವೆ. ರೈತರು ಕಬ್ಬು ನೀಡಲು ಒಪ್ಪಿದರೆ, ಜಿಲ್ಲಾಡಳಿತ ಬಂದೋಬಸ್ತ್ ಮಾಡಬೇಕು’ ಎಂದು ಜಮಖಂಡಿ ಶುಗರ್ಸ್ ಮಾಲೀಕ ಆನಂದ ನ್ಯಾಮಗೌಡ ಹೇಳಿದರು.

ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯೊಂದನ್ನು ಮುಧೋಳ ಬಳಿಯ ಮಹಾಲಿಂಗಪುರ ಬೈಪಾಸ್ ಬಳಿ ಕೆಲ ಕಿಡಿಗೇಡಿಗಳು ರಸ್ತೆಯಿಂದ ಕೆಳಕ್ಕೆ ಉರುಳಿಸಿದರು. ಚಕ್ರದ ಗಾಳಿ ತೆಗೆದರು.

ಹಾವೇರಿಯಲ್ಲಿ ಮಂಗಳವಾರವೂ ಕಬ್ಬು ಬೆಳೆಗಾರರ ಧರಣಿ ಮುಂದುವರೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.