ADVERTISEMENT

ಒಂದೇ ಸೂರಿನಡಿ ‘ಆರೋಗ್ಯ ಕರ್ನಾಟಕ’

ಚಿಕಿತ್ಸಾ ವೆಚ್ಚ ಒಪ್ಪಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವರ ಮನವಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 17:38 IST
Last Updated 1 ಜುಲೈ 2018, 17:38 IST
ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಟಿ ಸ್ಕ್ಯಾನ್‌ ಯಂತ್ರಕ್ಕೆ ಭಾನುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು
ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಟಿ ಸ್ಕ್ಯಾನ್‌ ಯಂತ್ರಕ್ಕೆ ಭಾನುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು   

ಬಾಗಲಕೋಟೆ: ‘ಯಶಸ್ವಿನಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒಂದೇ ಸೂರಿನಡಿ ತಂದು ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದ ದರ ಒಪ್ಪಿಕೊಂಡು ಯೋಜನೆ ಯಶಸ್ಸಿಗೆ ಕೈಜೋಡಿಸುವಂತೆ’ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಖಾಸಗಿ ವೈದ್ಯರಿಗೆ ಮನವಿ ಮಾಡಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲಾದ ನೂತನ ಸಿಟಿ ಸ್ಕ್ಯಾನ್ ಯಂತ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಆರೋಗ್ಯ ಕ್ಷೇತ್ರದ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿ ಚಿಕಿತ್ಸಾ ವೆಚ್ಚವನ್ನು ನಿಗದಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಇಬ್ಬರ (ಸರ್ಕಾರ ಹಾಗೂ ವೈದ್ಯರು) ಉದ್ದೇಶವೂ ಸ್ಪಷ್ಟವಿರಲಿ. ಸರ್ಕಾರ ಇಲ್ಲವೇ ರೋಗಿಗಳ ಶೋಷಣೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದರು.

‘ಕೆಲವೇ ಧನದಾಹಿ ವೈದ್ಯರಿಂದಾಗಿ ರೋಗಿಗಳ ಶೋಷಣೆಯಾಗುತ್ತಿದೆ. ಅವರು ಔಷಧ ತಯಾರಿಕೆ ಕಂಪೆನಿಗಳ ಕೈಗೊಂಬೆಗಳಾಗಿರುವ ಕಾರಣ ವಿಚಿತ್ರವಾದ ಮಾರುಕಟ್ಟೆ ಈ ದೇಶದಲ್ಲಿ ಸೃಷ್ಟಿಯಾಗಿದೆ. ಜೊತೆಗೆ ವೈದ್ಯ ವೃತ್ತಿಗೂ ಕೆಟ್ಟ ಹೆಸರು ಬರುತ್ತಿದೆ. ಕಂಪೆನಿಗಳ ಟ್ರೇಡ್‌ನೇಮ್ ಬೆನ್ನತ್ತಿ ರೋಗಿಗಳಿಗೆ ಔಷಧಿ ಬರೆದುಕೊಡುವುದನ್ನು ನಿಲ್ಲಿಸಿ’ ಎಂದು ಮನವಿ ಮಾಡಿದರು.

ADVERTISEMENT

‘ರಾಜ್ಯ ಸರ್ಕಾರ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಪ್ರತಿ ವರ್ಷ ₹ 9 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಹಾಗಿದ್ದರೂ ಸೂಕ್ತ ಚಿಕಿತ್ಸಾ ವ್ಯವಸ್ಥೆ ಬಡವರಿಗೆ ತಲುಪುತ್ತಿಲ್ಲ. ಇದರ ಬಗ್ಗೆ ವೈದ್ಯ ಸಮೂಹ ಹಾಗೂ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದ ಅವರು, ‘ಆರೋಗ್ಯ ಕ್ಷೇತ್ರದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ (ಬಿಪಿಎಲ್) ಸವಲತ್ತುಗಳನ್ನು ಎಪಿಎಲ್‌ನವರು ಸುಳ್ಳು ದಾಖಲೆ ನೀಡಿ ಕಬಳಿಸುತ್ತಿದ್ದಾರೆ. ಅದಕ್ಕೆಲ್ಲಾ ಕಡಿವಾಣ ಹಾಕಲು ಸರ್ಕಾರ ಪ್ರಯತ್ನ ಮಾಡುತ್ತಿದೆ’ ಎಂದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರಗಳ ಸೇವೆ ಶೇ 100ರಷ್ಟು ಉಚಿತವಾಗಿ ನೀಡಲಾಗುವುದು.ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಿದೆ. ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳನ್ನು ರಾಜ್ಯದ ಐದು ಆಸ್ಪತ್ರೆಗಳಿಗೆ ನೀಡಲಾಗುತ್ತಿದ್ದು, ಈಗಾಗಲೇ ಎರಡು ಕಡೆ ಅಳವಡಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಶೀಘ್ರದಲ್ಲಿಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ದಾದಿಯರ ಕೊರತೆ ನೀಗಿಸಲಾಗುವುದು ಎಂದು ಹೇಳಿದ ಶಿವಾನಂದ ಪಾಟೀಲ, ಸಾರ್ವಜನಿಕರು ತಮ್ಮ ಜೀವನ ಶೈಲಿ ಬದಲಾಯಿಸಿಕೊಂಡು ರೋಗಗಳಿಂದ ದೂರ ಇದ್ದರೆ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಮಾಡುವ ವೆಚ್ಚವನ್ನು ಉಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡೆ, ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸದಸ್ಯರಾದ ಮಹಾಂತೇಶ ಉದಪುಡಿ, ಬಸವರಾಜ ಖೋತ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಸಿಇಒ ವಿಕಾಸ್ ಸುರಳಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅನಂತರಡ್ಡಿ ರಡ್ಡೇರ ಹಾಜರಿದ್ದರು.

ರಾಜ್ಯದಲ್ಲಿ ವೈದ್ಯರು ಮುಷ್ಕರ ಮಾಡುವ ಪರಿಸ್ಥಿತಿ ಮತ್ತೆ ಬಾರದಂತೆ ನೋಡಿಕೊಳ್ಳುವೆ. ಅದೇ ರೀತಿ ವೈದ್ಯ ಸಮೂಹ ಕೂಡ ತಮ್ಮ ಹೊಣೆಗಾರಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು
- ಶಿವಾನಂದ ಪಾಟೀಲ, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.